13
ನಡುಪಟ್ಟಿಯ ಸಂಕೇತ
1 ಯೆಹೋವನು ನನಗೆ ಹೀಗೆ ಹೇಳಿದನು, “ಯೆರೆಮೀಯನೇ, ಹೋಗಿ ಒಂದು ನಾರಿನ ನಡುಪಟ್ಟಿಯನ್ನು ಕೊಂಡುಕೊ. ಅದನ್ನು ನಿನ್ನ ಸೊಂಟಕ್ಕೆ ಸುತ್ತಿಕೊ. ಆ ನಡುಪಟ್ಟಿ ನೀರಿನಲ್ಲಿ ನೆನೆಯದಂತೆ ನೋಡಿಕೋ.”
2 ಯೆಹೋವನು ಹೇಳಿದಂತೆ ನಾನು ಒಂದು ನಾರಿನ ನಡುಪಟ್ಟಿಯನ್ನು ಕೊಂಡು ತಂದೆನು. ಅದನ್ನು ನನ್ನ ಸೊಂಟಕ್ಕೆ ಸುತ್ತಿಕೊಂಡೆನು. 3 ಆಗ ಎರಡನೇ ಸಲ ನನಗೆ ಯೆಹೋವನ ಸಂದೇಶ ಬಂದಿತು. 4 ಆ ಸಂದೇಶವಿದು, “ಯೆರೆಮೀಯನೇ, ನೀನು ಕೊಂಡ ತಂದು ಸುತ್ತಿಕೊಂಡ ನಡುಪಟ್ಟಿಯನ್ನು ತೆಗೆದುಕೊಂಡು ಪೆರಾತ್ಗೆ ಹೋಗು. ಆ ನಡುಪಟ್ಟಿಯನ್ನು ಬೆಟ್ಟದ ಸಂದಿನಲ್ಲಿ ಬಚ್ಚಿಡು.”
5 ಆದ್ದರಿಂದ ನಾನು ಪೆರಾತ್ಗೆ ಹೋದೆ. ಯೆಹೋವನು ಹೇಳಿದ ಪ್ರಕಾರ ನಡುಪಟ್ಟಿಯನ್ನು ಬಚ್ಚಿಟ್ಟೆ. 6 ಬಹಳ ದಿನಗಳಾದ ತರುವಾಯ, ಯೆಹೋವನು ನನಗೆ, “ಯೆರೆಮೀಯನೇ, ಪೆರಾತ್ಗೆ ಹೋಗು, ನಾನು ನಿನಗೆ ಅಲ್ಲಿ ಬಚ್ಚಿಡಲು ಹೇಳಿದ ನಡುಪಟ್ಟಿಯನ್ನು ತೆಗೆದುಕೊಂಡು ಬಾ” ಎಂದು ಹೇಳಿದನು.
7 ನಾನು ಪೆರಾತ್ಗೆ ಹೋದೆ ಮತ್ತು ನಡುಪಟ್ಟಿಯನ್ನು ಬಚ್ಚಿಟ್ಟ ಬೆಟ್ಟದ ಸಂದಿನಿಂದ ಹೊರತೆಗೆದೆ. ಆದರೆ ಆ ನಡುಪಟ್ಟಿ ಹಾಳಾಗಿಹೋಗಿತ್ತು. ನಾನು ಅದನ್ನು ಧರಿಸಲಾಗಲಿಲ್ಲ. ಅದು ಯಾವುದಕ್ಕೂ ಪ್ರಯೋಜನವಿರಲಿಲ್ಲ.
8 ಆಗ ನನಗೆ ಯೆಹೋವನ ಸಂದೇಶ ಬಂದಿತು. 9 ಯೆಹೋವನು ಹೀಗೆ ಹೇಳಿದನು, “ನಡುಪಟ್ಟಿಯು ಹಾಳಾಗಿ ನಿಷ್ಪ್ರಯೋಜಕವಾಗಿದೆ. ಅಂತೆಯೇ ನಾನು ಯೆಹೂದದ ಮತ್ತು ಜೆರುಸಲೇಮಿನ ಜಂಬದ ಜನರನ್ನು ಹಾಳುಮಾಡುತ್ತೇನೆ. 10 ಯೆಹೂದದಲ್ಲಿ ದುಷ್ಟರೂ ಗರ್ವಿಷ್ಠರೂ ಆಗಿರುವ ಜನರನ್ನು ಹಾಳುಮಾಡುವೆನು. ಅವರು ನನ್ನ ಸಂದೇಶವನ್ನು ಕೇಳುವುದಿಲ್ಲ. ಅವರು ಹಟಮಾರಿಗಳೂ ತಮ್ಮ ಮನಸ್ಸಿಗೆ ಬಂದಂತೆ ಮಾಡುವವರೂ ಆಗಿದ್ದಾರೆ. ಅವರು ಬೇರೆ ದೇವರುಗಳನ್ನು ಅನುಸರಿಸುತ್ತಾರೆ ಮತ್ತು ಪೂಜಿಸುತ್ತಾರೆ. ಯೆಹೂದದ ಜನರು ಈ ನಾರಿನ ನಡುಪಟ್ಟಿಯಂತೆ ಆಗುವರು. ಅವರು ಹಾಳಾಗಿ ನಿಷ್ಪ್ರಯೋಜಕರಾಗುವರು. 11 ಪುರುಷನೊಬ್ಬನು ನಡುಪಟ್ಟಿಯನ್ನು ಬಿಗಿಯಾಗಿ ಸೊಂಟಕ್ಕೆ ಸುತ್ತಿಕೊಳ್ಳುವಂತೆ ನಾನು ಇಸ್ರೇಲಿನ ಎಲ್ಲಾ ವಂಶಗಳನ್ನು ಮತ್ತು ಯೆಹೂದದ ಎಲ್ಲಾ ವಂಶಗಳನ್ನು ನನ್ನ ಸುತ್ತಲೂ ಬಿಗಿದುಕೊಂಡೆನು.” ಇದು ಯೆಹೋವನಿಂದ ಬಂದ ಮಾತು. “ಅವರು ನನ್ನ ಜನರಾಗುವರು ಎಂದುಕೊಂಡು ನಾನು ಹಾಗೆ ಮಾಡಿದೆ. ನನ್ನ ಜನರು ನನಗೆ ಕೀರ್ತಿ, ಸ್ತುತಿ, ಗೌರವ ತರುವರೆಂದು ತಿಳಿದಿದ್ದೆ. ಆದರೆ ನನ್ನ ಜನರು ನನ್ನ ಮಾತನ್ನು ಕೇಳದೆಹೋದರು.”
ಯೆಹೂದಕ್ಕೆ ಕೊಟ್ಟ ಎಚ್ಚರಿಕೆಗಳು
12 “ಯೆರೆಮೀಯನೇ, ಯೆಹೂದದ ಜನರಿಗೆ, ‘ಇಸ್ರೇಲಿನ ದೇವರಾದ ಯೆಹೋವನು ಪ್ರತಿಯೊಂದು ಚರ್ಮದ ಬುದ್ದಲಿಯು ದ್ರಾಕ್ಷಾರಸದಿಂದ ತುಂಬಿರಬೇಕು ಎಂದು ಹೇಳುತ್ತಾನೆ’ ಎಂದು ಹೇಳು. ಆಗ ಆ ಜನರು ನಕ್ಕು, ‘ಪ್ರತಿಯೊಂದು ಚರ್ಮದ ಬುದ್ದಲಿಯು ದ್ರಾಕ್ಷಾರಸದಿಂದ ತುಂಬಿರಬೇಕೆಂಬುದು ನಮಗೆ ಚೆನ್ನಾಗಿ ಗೊತ್ತು’ ಎಂದು ನಿನಗೆ ಹೇಳುತ್ತಾರೆ. 13 ಆಗ ನೀನು ಅವರಿಗೆ, ‘ಯೆಹೋವನು ಹೀಗೆ ಹೇಳುತ್ತಾನೆ ಎಂದು ಹೇಳು. ಈ ಪ್ರದೇಶದಲ್ಲಿ ವಾಸಮಾಡುವ ಪ್ರತಿಯೊಬ್ಬ ಮನುಷ್ಯನನ್ನು ಕುಡಿದು ಮತ್ತನಾದವನಂತೆ ಅಸಹಾಯಕನನ್ನಾಗಿ ಮಾಡುತ್ತೇನೆ. ನಾನು ದಾವೀದನ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ರಾಜರ ಬಗ್ಗೆ ಹೇಳುತ್ತಿದ್ದೇನೆ. ನಾನು ಯಾಜಕರ, ಪ್ರವಾದಿಗಳ ಮತ್ತು ಜೆರುಸಲೇಮಿನಲ್ಲಿ ವಾಸಿಸುವ ಎಲ್ಲಾ ಜನರ ಬಗ್ಗೆಯೂ ಹೇಳುತ್ತಿದ್ದೇನೆ. 14 ಯೆಹೂದದ ಜನರು ಎಡವಿ, ಒಬ್ಬರಮೇಲೊಬ್ಬರು ಬೀಳುವಂತೆ ನಾನು ಮಾಡುವೆನು. ತಂದೆ ಮತ್ತು ಮಕ್ಕಳು ಒಬ್ಬರಮೇಲೊಬ್ಬರು ಬೀಳುವರು.’ ” ಇದು ಯೆಹೋವನ ನುಡಿ. “ ‘ನಾನು ಅವರಿಗಾಗಿ ಕನಿಕರಪಡುವದಿಲ್ಲ ಅಥವಾ ಕರುಣೆ ತೋರಿಸುವದಿಲ್ಲ. ಯೆಹೂದದ ಜನರ ವಿನಾಶವನ್ನು ಕರುಣೆಯು ತಡೆಯದಂತೆ ನೋಡಿಕೊಳ್ಳುತ್ತೇನೆ.’ ”
15 ಕೇಳಿರಿ, ಗಮನ ಕೊಡಿರಿ;
ದೇವರು ನಿಮಗೆ ಹೇಳಿದ್ದಾನೆ.
ಗರ್ವಪಡಬೇಡಿರಿ.
16 ನಿಮ್ಮ ದೇವರಾದ ಯೆಹೋವನು
ಅಂಧಕಾರವನ್ನು ಉಂಟುಮಾಡುವ ಮೊದಲೇ ಆತನನ್ನು ಗೌರವಿಸಿರಿ,
ಕಗ್ಗತ್ತಲಿನ ಬೆಟ್ಟಗಳ ಮೇಲೆ ನೀವು ಬೀಳುವ ಮೊದಲೇ ಆತನನ್ನು ಸ್ತುತಿಸಿರಿ.
ಯೆಹೂದದ ಜನರಾದ ನೀವು ಬೆಳಕನ್ನು ನಿರೀಕ್ಷಿಸುತ್ತಿದ್ದೀರಿ.
ಆದರೆ ಯೆಹೋವನು ಬೆಳಕನ್ನು ಗಾಢಾಂಧಕಾರವನ್ನಾಗಿ ಪರಿವರ್ತಿಸುವನು.
17 ಯೆಹೂದದ ಜನರಾದ ನೀವು ಯೆಹೋವನ ಮಾತನ್ನು ಕೇಳದಿದ್ದರೆ,
ನಾನು ಗುಟ್ಟಾದ ಸ್ಥಳದಲ್ಲಿ ಅಳುವೆನು.
ನಿಮ್ಮ ಅಹಂಕಾರವು ನನ್ನನ್ನು ಅಳುವ ಹಾಗೆ ಮಾಡುವುದು.
ನಾನು ಬಹಳ ಗಟ್ಟಿಯಾಗಿ ಅಳುವೆನು,
ನನ್ನ ಕಣ್ಣುಗಳಿಂದ ಕಣ್ಣೀರು ಹೊರಸೂಸುವುದು.
ಏಕೆಂದರೆ ಯೆಹೋವನ ಮಂದೆಯು ಸೆರೆಹಿಡಿಯಲ್ಪಡುವುದು.
18 ಈ ಸಂಗತಿಗಳನ್ನು ರಾಜನಿಗೂ ರಾಣಿಗೂ ಹೇಳಿರಿ:
“ನಿಮ್ಮ ಸಿಂಹಾಸನಗಳಿಂದ ಕೆಳಗಿಳಿದು ಬನ್ನಿ.
ನಿಮ್ಮ ಸುಂದರವಾದ ಕಿರೀಟಗಳು ನಿಮ್ಮ ತಲೆಯಿಂದ ಉರುಳಿ ಕೆಳಗೆ ಬಿದ್ದಿವೆ” ಎಂದು ಹೇಳಿರಿ.
19 ನೆಗೆವ್ ಮರುಭೂಮಿಯ ಎಲ್ಲಾ ನಗರಗಳಿಗೆ ಬೀಗ ಹಾಕಲಾಗಿದೆ.
ಅವುಗಳನ್ನು ತೆರೆಯುವುದು ಯಾರಿಂದಲೂ ಸಾಧ್ಯವಿಲ್ಲ.
ಯೆಹೂದದ ಎಲ್ಲಾ ಜನರು ಸೆರೆ ಒಯ್ಯಲ್ಪಟ್ಟಿದ್ದಾರೆ.
ಅವರೆಲ್ಲರನ್ನು ಸೆರೆಯಾಳುಗಳಾಗಿ ತೆಗೆದುಕೊಂಡು ಹೋಗಲಾಗಿದೆ.
20 ಜೆರುಸಲೇಮೇ, ಮುಖವೆತ್ತಿ ನೋಡು.
ಉತ್ತರ ದಿಕ್ಕಿನಿಂದ ಬರುವ ಶತ್ರುಗಳನ್ನು ನೋಡು.
ನಿನ್ನ ಮಂದೆ* ಮಂದೆ ಇಲ್ಲಿ “ಮಂದೆ” ಎಂದರೆ ಜೆರುಸಲೇಮಿನ ಸುತ್ತಮುತ್ತಲಿನ ಪಟ್ಟಣಗಳು. ಜೆರುಸಲೇಮ್ ಒಬ್ಬ ಕುರುಬನಂತೆ ಇದ್ದು ಯೆಹೂದದ ಉಳಿದ ಪಟ್ಟಣಗಳು ಅವನ ಮಂದೆಗಳು ಇದ್ದಂತೆ ಎಂಬ ಭಾವ. ಎಲ್ಲಿದೆ? ದೇವರು ನಿನಗೆ ಆ ಸುಂದರವಾದ ಮಂದೆಯನ್ನು ದಯಪಾಲಿಸಿದನು.
ನೀನು ಆ ಮಂದೆಯನ್ನು ನೋಡಿಕೊಳ್ಳಬೇಕಾಗಿತ್ತು.
21 ಯೆಹೋವನು ನಿನಗೆ ಆ ಮಂದೆಯ ಲೆಕ್ಕವನ್ನೊಪ್ಪಿಸು ಎಂದು ಕೇಳಿದರೆ ಏನು ಹೇಳುವೆ?
ಜನರಿಗೆ ದೇವರ ಬಗ್ಗೆ ತಿಳಿಸುವದು ನಿನ್ನ ಕರ್ತವ್ಯವಾಗಿತ್ತು.
ನಿನ್ನ ನಾಯಕರು ಜನರಿಗೆ ಮಾರ್ಗದರ್ಶನ ಮಾಡಬೇಕಾಗಿತ್ತು.
ಆದರೆ ಅವರು ತಮ್ಮ ಕೆಲಸವನ್ನು ಮಾಡಲಿಲ್ಲ.
ಆದ್ದರಿಂದ ನಿನಗೆ ಹೆಚ್ಚಿನ ನೋವು ಮತ್ತು ಕಷ್ಟಗಳು ಉಂಟಾಗುವವು.
ಪ್ರಸವವೇದನೆಯಂಥ ನೋವು ನಿನಗಾಗುವುದು.
22 “ಇಂಥ ಕೇಡು ನನಗೆ ಏಕೆ ಉಂಟಾಯಿತು?”
ಎಂದು ನಿನ್ನನ್ನು ನೀನೇ ಕೇಳಿಕೊಳ್ಳಬಹುದು.
ನೀನು ಮಾಡಿದ ಅನೇಕ ಪಾಪಗಳ ಫಲದಿಂದಲೇ ಆಯಿತು.
ನಿನ್ನ ಪಾಪಗಳ ಫಲವಾಗಿ ನಿನ್ನ ಲಂಗವನ್ನು ಹರಿಯಲಾಯಿತು.
ನಿನ್ನ ಪಾದರಕ್ಷೆಯನ್ನು ಕಿತ್ತುಕೊಳ್ಳಲಾಯಿತು.
ನಿನ್ನನ್ನು ಕಂಗೆಡಿಸುವದಕ್ಕಾಗಿ ಅವರು ಹೀಗೆ ಮಾಡಿದರು.
23 ಕಪ್ಪಗಿರುವವನು ತನ್ನ ಚರ್ಮದ ಬಣ್ಣವನ್ನು ಬದಲಿಸಲಾರನು.
ಚಿರತೆಯು ತನ್ನ ಮೈಮೇಲಿನ ಚುಕ್ಕೆಗಳನ್ನು ಬದಲಾಯಿಸಲಾರದು.
ಅದೇ ರೀತಿ, ಜೆರುಸಲೇಮ್ ನಗರವೇ, ನೀನು ಸಹ ಮಾರ್ಪಾಟು ಹೊಂದಿ ಒಳ್ಳೆಯದನ್ನು ಮಾಡಲಾರೆ.
ನೀನು ಯಾವಾಗಲೂ ಕೆಟ್ಟದ್ದನ್ನೇ ಮಾಡುವೆ.
24 “ನಾನು ನಿಮಗೆ ನಿಮ್ಮ ಮನೆಗಳನ್ನು ಬಿಟ್ಟು ಓಡಿಹೋಗುವಂತೆ ಒತ್ತಾಯ ಮಾಡುತ್ತೇನೆ.
ನೀವು ಎಲ್ಲಾ ದಿಕ್ಕುಗಳಲ್ಲಿಯೂ ಓಡಿಹೋಗುವಿರಿ.
ನೀವು ಮರುಭೂಮಿಯ ಗಾಳಿಯಿಂದ ಹಾರಿಹೋಗುವ ಹೊಟ್ಟಿನಂತಾಗುವಿರಿ.
25 ನಿಮ್ಮ ಗತಿ ಹೀಗಾಗುವುದು.
ನನ್ನ ಯೋಜನೆಗಳಲ್ಲಿ ಇದು ನಿಮ್ಮ ಪಾತ್ರ.”
ಇದು ಯೆಹೋವನ ನುಡಿ.
“ಏಕೆ ಹೀಗಾಗುವದು?
ಏಕೆಂದರೆ ನೀವು ನನ್ನನ್ನು ಮರೆತುಬಿಟ್ಟಿರಿ.
ಸುಳ್ಳುದೇವರುಗಳನ್ನು ನಂಬಿದಿರಿ.
26 ಜೆರುಸಲೇಮ್ ನಗರವೇ, ನಾನು ನಿನ್ನ ಲಂಗವನ್ನು ನಿನ್ನ ಮುಖದವರೆಗೆ ಎತ್ತಿಬಿಡುತ್ತೇನೆ.
ಎಲ್ಲರೂ ನಿನ್ನನ್ನು ನೋಡುತ್ತಾರೆ.
ನಿನಗೆ ನಾಚಿಕೆಯಾಗುತ್ತದೆ.
27 ನೀನು ಮಾಡಿದ ಭಯಾನಕ ಕೃತ್ಯಗಳನ್ನು ನಾನು ನೋಡಿದ್ದೇನೆ.
ನಿನ್ನ ಪ್ರಿಯತಮರ ಜೊತೆಗೆ ನಗುವದನ್ನೂ ಕಾಮದಾಟವಾಡುವದನ್ನೂ ನಾನು ನೋಡಿದ್ದೇನೆ.
ನೀನು ವೇಶ್ಯೆಯಂತೆ ನಡೆದುಕೊಳ್ಳಬೇಕೆಂದು ಯೋಚನೆ ಮಾಡಿದ್ದು ನನಗೆ ಗೊತ್ತು.
ನೀನು ಹೊಲಗಳಲ್ಲಿಯೂ ಬೆಟ್ಟಗಳಲ್ಲಿಯೂ ಮಾಡಿದ ಅಸಹ್ಯಕೃತ್ಯಗಳನ್ನು ನಾನು ನೋಡಿದ್ದೇನೆ.
ಜೆರುಸಲೇಮೇ, ಇದರಿಂದ ನಿನಗೆ ತುಂಬಾ ಕೇಡಾಗುವದು.
ನೀನು ಎಷ್ಟು ದಿನ ಹೀಗೆಯೇ ನಿನ್ನ ಪಾಪಕೃತ್ಯಗಳನ್ನು ಮುಂದುವರಿಸುವೆ ಎಂದು ನಾನು ಯೋಚಿಸುತ್ತಿದ್ದೇನೆ.”
*13:20: ಮಂದೆ ಇಲ್ಲಿ “ಮಂದೆ” ಎಂದರೆ ಜೆರುಸಲೇಮಿನ ಸುತ್ತಮುತ್ತಲಿನ ಪಟ್ಟಣಗಳು. ಜೆರುಸಲೇಮ್ ಒಬ್ಬ ಕುರುಬನಂತೆ ಇದ್ದು ಯೆಹೂದದ ಉಳಿದ ಪಟ್ಟಣಗಳು ಅವನ ಮಂದೆಗಳು ಇದ್ದಂತೆ ಎಂಬ ಭಾವ.