23
ಕೆಯೀಲಾದಲ್ಲಿ ದಾವೀದನು
1 ಜನರು ದಾವೀದನಿಗೆ, “ನೋಡು, ಫಿಲಿಷ್ಟಿಯರು ಕೆಯೀಲಾದವರ ವಿರುದ್ಧ ಹೋರಾಡುತ್ತಿದ್ದಾರೆ; ಅವರು ಕಣದಿಂದ ಧಾನ್ಯವನ್ನು ಸೂರೆ ಮಾಡುತ್ತಿದ್ದಾರೆ” ಎಂದು ಹೇಳಿದನು.
2 ದಾವೀದನು, “ನಾನು ಹೋಗಿ ಈ ಫಿಲಿಷ್ಟಿಯರೊಡನೆ ಹೋರಾಡಲೇ?” ಎಂದು ಯೆಹೋವನನ್ನು ಕೇಳಿದನು.
ಯೆಹೋವನು ದಾವೀದನಿಗೆ, “ಹೋಗು ಫಿಲಿಷ್ಟಿಯರ ಮೇಲೆ ಆಕ್ರಮಣ ಮಾಡು. ಕೆಯೀಲಾವನ್ನು ರಕ್ಷಿಸು” ಎಂದು ಹೇಳಿದನು.
3 ಆದರೆ ದಾವೀದನ ಜನರು ಅವನಿಗೆ, “ನೋಡು, ನಾವು ಯೆಹೂದದಲ್ಲಿದ್ದರೂ ಹೆದರಿರುವೆವು. ಫಿಲಿಷ್ಟಿಯರ ಸೈನ್ಯವೆಲ್ಲಿದೆಯೊ ಅಲ್ಲಿಗೆ ನಾವು ಹೋದರೆ, ಇನ್ನೆಷ್ಟು ಹೆದರುತ್ತೇವೆ ಎಂಬುದನ್ನು ಯೋಚಿಸು” ಎಂದರು.
4 ದಾವೀದನು ಮತ್ತೆ ಯೆಹೋವನನ್ನು ಕೇಳಿದನು. ಯೆಹೋವನು ದಾವೀದನಿಗೆ, “ಕೆಯೀಲಾಕ್ಕೆ ಹೋಗು. ಫಿಲಿಷ್ಟಿಯರನ್ನು ಸೋಲಿಸಲು ನಾನು ನಿನಗೆ ಸಹಾಯ ಮಾಡುತ್ತೇನೆ” ಎಂದು ಹೇಳಿದನು. 5 ಹೀಗೆ ದಾವೀದನು ಮತ್ತು ಅವನ ಜನರು ಕೆಯೀಲಾಕ್ಕೆ ಹೋದರು. ದಾವೀದನ ಜನರು ಫಿಲಿಷ್ಟಿಯರೊಡನೆ ಹೋರಾಡಿ ಅವರನ್ನು ಸೋಲಿಸಿ ಅವರ ಹಸುಗಳನ್ನು ವಶಪಡಿಸಿಕೊಂಡರು. ದಾವೀದನು ಈ ರೀತಿಯಲ್ಲಿ ಕೆಯೀಲಾದ ಜನರನ್ನು ರಕ್ಷಿಸಿದನು. 6 (ಎಬ್ಯಾತಾರನು ದಾವೀದನ ಹತ್ತಿರಕ್ಕೆ ಓಡಿಹೋದಾಗ ತನ್ನೊಂದಿಗೆ ಒಂದು ಏಫೋದನ್ನು ತೆಗೆದುಕೊಂಡಿದ್ದನು.)
7 ದಾವೀದನು ಈಗ ಕೆಯೀಲಾದಲ್ಲಿದ್ದಾನೆಂದು ಜನರು ಸೌಲನಿಗೆ ತಿಳಿಸಿದರು. ಸೌಲನು, “ದೇವರು ದಾವೀದನನ್ನು ನನಗೆ ಕೊಟ್ಟಿದ್ದಾನೆ! ದಾವೀದನು ತಾನಾಗಿಯೇ ಸಿಕ್ಕಿಹಾಕಿಕೊಂಡಿದ್ದಾನೆ. ಅವನು, ಬಾಗಿಲುಗಳಿರುವ ಹಾಗೂ ಕಬ್ಬಿಣದ ಸಲಾಕೆಗಳಿಂದ ಬೀಗ ಹಾಕಬಲ್ಲ ಬಾಗಿಲುಗಳಿರುವ ಪಟ್ಟಣದೊಳಕ್ಕೆ ಹೋಗಿದ್ದಾನೆ” ಎಂದು ಹೇಳಿದನು. 8 ಸೌಲನು ಯುದ್ಧಕ್ಕಾಗಿ ತನ್ನ ಸೈನ್ಯವನ್ನೆಲ್ಲ ಒಟ್ಟಿಗೆ ಕರೆದನು. ದಾವೀದನನ್ನೂ ಅವನ ಜನರನ್ನೂ ಆಕ್ರಮಿಸಲು ಕೆಯೀಲಾಕ್ಕೆ ಹೋಗಲು ಅವರೆಲ್ಲ ಸಿದ್ಧಗೊಂಡರು.
9 ಸೌಲನು ತನ್ನ ವಿರುದ್ಧವಾಗಿ ಉಪಾಯಗಳನ್ನು ಮಾಡುತ್ತಿದ್ದಾನೆಂಬುದು ದಾವೀದನಿಗೆ ತಿಳಿಯಿತು. ಆಗ ದಾವೀದನು ಯಾಜಕನಾದ ಎಬ್ಯಾತಾರನಿಗೆ, “ಎಫೋದನ್ನು ತೆಗೆದುಕೊಂಡು ಬಾ” ಎಂದನು.
10 ದಾವೀದನು, “ಇಸ್ರೇಲರ ದೇವರಾದ ಯೆಹೋವನೇ, ಸೌಲನು ನನಗಾಗಿ ಕೆಯೀಲಾಕ್ಕೆ ಬರುತ್ತಾನೆಂಬುದೂ ಈ ಪಟ್ಟಣವನ್ನು ನಾಶಗೊಳಿಸುತ್ತಾನೆಂಬುದೂ ತಿಳಿಯಿತು. 11 ಸೌಲನು ಕೆಯೀಲಾಕ್ಕೆ ಬರುತ್ತಾನೆಯೇ? ಕೆಯೀಲಾದ ಜನರು ನನ್ನನ್ನು ಸೌಲನಿಗೆ ಒಪ್ಪಿಸುತ್ತಾರೆಯೇ? ಇಸ್ರೇಲರ ದೇವರಾದ ಯೆಹೋವನೇ, ನಾನು ನಿನ್ನ ಸೇವಕ! ದಯವಿಟ್ಟು ನನಗೆ ತಿಳಿಸು!” ಎಂದು ಪ್ರಾರ್ಥಿಸಿದನು.
ಯೆಹೋವನು, “ಸೌಲನು ಬರುತ್ತಾನೆ” ಎಂದು ಉತ್ತರಿಸಿದನು.
12 ಅನಂತರ ದಾವೀದನು, “ಕೆಯೀಲಾದ ಜನರು ನನ್ನನ್ನೂ ನನ್ನ ಜನರನ್ನೂ ಸೌಲನಿಗೆ ಒಪ್ಪಿಸುತ್ತಾರೆಯೇ?” ಎಂದು ಕೇಳಿದನು.
ಯೆಹೋವನು, “ಅವರು ಒಪ್ಪಿಸುತ್ತಾರೆ” ಎಂದನು.
13 ಆದ್ದರಿಂದ ದಾವೀದನು ಮತ್ತು ಅವನ ಜನರು ಕೆಯೀಲಾವನ್ನು ಬಿಟ್ಟುಹೋದರು. ದಾವೀದನ ಜೊತೆಯಲ್ಲಿ ಸುಮಾರು ಆರುನೂರು ಜನರಿದ್ದರು. ದಾವೀದನು ಮತ್ತು ಅವನ ಜನರು ಸ್ಥಳದಿಂದ ಸ್ಥಳಕ್ಕೆ ಹೋಗುತ್ತಿದ್ದರು. ದಾವೀದನು ಕೆಯೀಲಾದಿಂದ ತಪ್ಪಿಸಿಕೊಂಡು ಹೋದನೆಂಬುದು ಸೌಲನಿಗೆ ತಿಳಿಯಿತು. ಆದ್ದರಿಂದ ಸೌಲನು ಆ ನಗರಕ್ಕೆ ಹೋಗಲಿಲ್ಲ.
ಸೌಲನು ದಾವೀದನನ್ನು ಅಟ್ಟಿಸಿಕೊಂಡು ಹೋಗುವನು
14 ದಾವೀದನು ಜೀಫ್ ಅರಣ್ಯದಲ್ಲಿರುವ ಬೆಟ್ಟಪ್ರದೇಶವಾದ ಆಶ್ರಯಗಿರಿಗಳಲ್ಲಿ ಅಡಗಿಕೊಂಡಿದ್ದನು. ಸೌಲನು ಪ್ರತಿದಿನವೂ ದಾವೀದನಿಗಾಗಿ ಹುಡುಕುತ್ತಿದ್ದನು, ಆದರೆ ದಾವೀದನನ್ನು ಹಿಡಿಯಲು ಯೆಹೋವನು ಸೌಲನಿಗೆ ಅವಕಾಶ ಕೊಡಲಿಲ್ಲ.
15 ದಾವೀದನು ಜೀಫ್ ಅರಣ್ಯದ ಹೋರೆಷದಲ್ಲಿ ಅಡಗಿಕೊಂಡಿದ್ದನು. ಸೌಲನು ತನ್ನನ್ನು ಕೊಲ್ಲಲು ಬರುತ್ತಾನೆಂದು ದಾವೀದನು ಹೆದರಿದ್ದನು. 16 ಆದರೆ ಸೌಲನ ಮಗನಾದ ಯೋನಾತಾನನು ಹೋರೆಷಿಗೆ ಹೋಗಿ ದಾವೀದನನ್ನು ಸಂಧಿಸಿ ದೇವರಲ್ಲಿ ಹೆಚ್ಚು ನಂಬಿಕೆಯನ್ನಿಡುವಂತೆ ಅವನನ್ನು ಪ್ರೋತ್ಸಾಹಿಸಿ, 17 “ಹೆದರಬೇಡ, ನನ್ನ ತಂದೆಯಾದ ಸೌಲನು ನಿನಗೆ ತೊಂದರೆ ಮಾಡುವುದಿಲ್ಲ. ನೀನು ಇಸ್ರೇಲಿನ ರಾಜನಾಗುವೆ! ನಾನು ನಿನಗೆ ಎರಡನೆಯವನಾಗುತ್ತೇನೆ. ಇದು ನನ್ನ ತಂದೆಗೂ ಸಹ ತಿಳಿದಿದೆ” ಎಂದು ಹೇಳಿದನು.
18 ಯೋನಾತಾನನು ಮತ್ತು ದಾವೀದನು ಯೆಹೋವನ ಸನ್ನಿಧಿಯಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡರು. ನಂತರ ಯೋನಾತಾನನು ಮನೆಗೆ ಹೋದನು. ದಾವೀದನು ಹೋರೆಷಿನಲ್ಲಿ ನೆಲೆಸಿದನು.
ದಾವೀದನ ಬಗ್ಗೆ ಜೀಫಿನ ಜನರು ಸೌಲನಿಗೆ ತಿಳಿಸಿದರು
19 ಜೀಫಿನ ಜನರು ಗಿಬೆಯದಲ್ಲಿದ್ದ ಸೌಲನ ಬಳಿಗೆ ಬಂದು, “ದಾವೀದನು ನಮ್ಮ ಪ್ರಾಂತ್ಯದಲ್ಲಿ ಅಡಗಿಕೊಂಡಿದ್ದಾನೆ. ಅವನು ಹೋರೆಷಿನ ಕೋಟೆಯಲ್ಲಿದ್ದಾನೆ. ಅವನು ಜೆಸಿಮೋನಿನ ದಕ್ಷಿಣಕ್ಕಿರುವ ಹಕೀಲಾ ಬೆಟ್ಟದ ಮೇಲಿದ್ದಾನೆ. 20 ಈಗ ರಾಜನೇ, ನಿನಗಿಷ್ಟ ಬಂದಾಗ ಯಾವ ಸಮಯದಲ್ಲೇ ಆಗಲಿ ಬಂದುಬಿಡು. ದಾವೀದನನ್ನು ನಿನಗೆ ಒಪ್ಪಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.
21 ಸೌಲನು, “ನೀವು ನನಗೆ ಸಹಾಯ ಮಾಡುತ್ತಿರುವುದಕ್ಕಾಗಿ ಯೆಹೋವನು ನಿಮ್ಮನ್ನು ಆಶೀರ್ವದಿಸಲಿ. 22 ಹೋಗಿ, ಅವನ ಬಗ್ಗೆ ಹೆಚ್ಚು ತಿಳಿದುಕೊಳ್ಳಿ. ದಾವೀದನು ಎಲ್ಲಿ ನೆಲೆಸಿದ್ದಾನೆಂಬುದನ್ನೂ ಅವನನ್ನು ನೋಡಿದವರು ಯಾರೆಂಬುದನ್ನೂ ಕಂಡುಹಿಡಿಯಿರಿ. ಅವನು ಬಹಳ ಯುಕ್ತಿವಂತನಾಗಿದ್ದಾನೆ. 23 ದಾವೀದನು ಅಡಗಿಕೊಳ್ಳತಕ್ಕ ಎಲ್ಲಾ ಸ್ಥಳಗಳನ್ನು ಕಂಡುಹಿಡಿಯಿರಿ. ನೀವು ಹಿಂದಿರುಗಿ ನನ್ನ ಬಳಿಗೆ ಬಂದು ಎಲ್ಲವನ್ನೂ ನನಗೆ ತಿಳಿಸಿ. ಅನಂತರ ನಾನು ನಿಮ್ಮೊಂದಿಗೆ ಬರುತ್ತೇನೆ. ದಾವೀದನು ಆ ಪ್ರಾಂತ್ಯದಲ್ಲಿದ್ದರೆ, ನಾನು ಅವನನ್ನು ಕಂಡು ಹಿಡಿಯುತ್ತೇನೆ. ಅವನು ಯೆಹೂದ ಕುಲಗಳಲ್ಲಿ ಎಲ್ಲೇ ಇದ್ದರೂ ಸಹ ನಾನು ಅವನನ್ನು ಕಂಡುಹಿಡಿಯುತ್ತೇನೆ” ಎಂದು ಹೇಳಿದನು.
24 ನಂತರ ಜೀಫಿನ ಜನರು ಜೀಫಿಗೆ ಹಿಂದಿರುಗಿದರು. ಸೌಲನು ಅನಂತರ ಅಲ್ಲಿಗೆ ಹೋದನು.
ದಾವೀದನು ಮತ್ತು ಅವನ ಜನರು ಮಾವೋನ್ ಅರಣ್ಯದ ದಕ್ಷಿಣ ದಿಕ್ಕಿನಲ್ಲಿರುವ ಜೆಸಿಮೋನಿನ ಮರಳುಗಾಡಿನ ಪ್ರಾಂತ್ಯದಲ್ಲಿದ್ದರು. 25 ಸೌಲನು ಮತ್ತು ಅವನ ಜನರು ದಾವೀದನನ್ನು ಕಂಡುಹಿಡಿಯಲು ಹೋದರು. ಆದರೆ ದಾವೀದನನ್ನು ಜನರು ಎಚ್ಚರಿಸಿದರು. ಸೌಲನು ಅವನನ್ನು ಹುಡುಕುತ್ತಿರುವನೆಂದು ಜನರು ಅವನಿಗೆ ಹೇಳಿದರು. ದಾವೀದನು ಮಾವೋನಿನ ಅರಣ್ಯದಲ್ಲಿರುವ ಕಡಿದಾದ ಬೆಟ್ಟಕ್ಕೆ ಹೋದನು. ದಾವೀದನು ಮಾವೋನಿನ ಅರಣ್ಯಕ್ಕೆ ಹೋದನೆಂಬುದನ್ನು ಕೇಳಿದ ಸೌಲನು ದಾವೀದನನ್ನು ಕಂಡುಹಿಡಿಯಲು ಆ ಸ್ಥಳಕ್ಕೆ ಹೋದನು.
26 ಸೌಲನು ಬೆಟ್ಟದ ಒಂದು ದಿಕ್ಕಿನಲ್ಲಿದ್ದನು. ದಾವೀದ ಮತ್ತು ಅವನ ಜನರು ಅದೇ ಬೆಟ್ಟದ ಮತ್ತೊಂದು ದಿಕ್ಕಿನಲ್ಲಿದ್ದರು. ದಾವೀದನು ಸೌಲನಿಂದ ದೂರ ಹೋಗಲು ತವಕಿಸುತ್ತಿದ್ದನು. ದಾವೀದನನ್ನು ಅವನ ಜನರೊಡನೆ ಬಂಧಿಸಲು ಸೌಲನು ತನ್ನ ಸೈನಿಕರೊಂದಿಗೆ ಬೆಟ್ಟದ ಸುತ್ತಲೂ ಹೋಗುತ್ತಿದ್ದನು.
27 ಆದರೆ ಸೌಲನ ಬಳಿಗೆ ಒಬ್ಬ ಸಂದೇಶಕನು ಬಂದು, “ಫಿಲಿಷ್ಟಿಯರು ನಮ್ಮನ್ನು ಆಕ್ರಮಣ ಮಾಡುತ್ತಿದ್ದಾರೆ, ಬೇಗ ಬಾ!” ಎಂದು ಹೇಳಿದನು.
28 ಆದ್ದರಿಂದ ದಾವೀದನನ್ನು ಅಟ್ಟಿಸಿಕೊಂಡು ಹೋಗುವುದನ್ನು ಸೌಲನು ನಿಲ್ಲಿಸಿ ಫಿಲಿಷ್ಟಿಯರೊಡನೆ ಹೋರಾಡಲು ಹೋದನು. ಆದ್ದರಿಂದಲೇ ಜನರು ಆ ಜಾಗವನ್ನು “ಜಾರುಬಂಡೆ” ಎಂದು ಕರೆಯುತ್ತಾರೆ. 29 ದಾವೀದನು ಮಾವೋನ್ ಅರಣ್ಯವನ್ನು ಬಿಟ್ಟು ಏಂಗೆದಿಯ ಕೋಟೆಗಳಿಗೆ ಹೋದನು.