47
ಫಿಲಿಷ್ಟಿಯದ ವಿಷಯವಾದ ದೈವೋಕ್ತಿ
1 ಫರೋಹನು ಗಾಜಾ ಊರನ್ನು ಹೊಡೆದದ್ದಕ್ಕೆ ಮುಂಚಿತವಾಗಿ ಯೆಹೋವನು ಫಿಲಿಷ್ಟಿಯರ ವಿಷಯವಾಗಿ ಪ್ರವಾದಿಯಾದ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯ.
2 ಯೆಹೋವನು ಇಂತೆನ್ನುತ್ತಾನೆ,
“ಇಗೋ, ಪ್ರವಾಹವು ಉತ್ತರದಿಕ್ಕಿನಿಂದ ಹೊರಟು ತುಂಬಿತುಳುಕುವ ತೊರೆಯಾಗಿ ದೇಶವನ್ನೂ,
ಅದರಲ್ಲಿರುವ ಸಮಸ್ತವನ್ನೂ, ಪಟ್ಟಣವನ್ನೂ ಮತ್ತು ಪಟ್ಟಣದ ನಿವಾಸಿಗಳನ್ನೂ ಆಕ್ರಮಿಸುವುದು.
ಆಗ ಅಲ್ಲಿನವರು ಮೊರೆಯಿಡುವರು, ದೇಶದವರೆಲ್ಲಾ ಗೋಳಾಡುವರು.
3 ಶತ್ರುವಿನ ಕುದುರೆಗಳ ಗೊರಸುಗಳು ನೆಲವನ್ನು ಅಪ್ಪಳಿಸುವ ಶಬ್ದಕ್ಕೂ, ರಥಗಳ ರಭಸಕ್ಕೂ,
ಚಕ್ರಗಳ ಬಿರುಗುಟ್ಟುವಿಕೆಗೂ ತಂದೆಗಳು ಹೆದರುತ್ತಾ ಜೋಲುಗೈ ಉಳ್ಳವರಾಗಿ ತಮ್ಮ ಮಕ್ಕಳನ್ನು ಹಿಂದಿರುಗಿ ನೋಡರು.
4 ಏಕೆಂದರೆ ಆ ದಿನದಲ್ಲಿ ಫಿಲಿಷ್ಟಿಯರೆಲ್ಲರೂ ಸೂರೆಯಾಗುವರು, ತೂರಿನ ಮತ್ತು ಚೀದೋನಿನ ಸಹಾಯಕರಲ್ಲಿ ಉಳಿದವರೆಲ್ಲಾ ನಿರ್ಮೂಲವಾಗುವರು;
ಕಫ್ತೋರ್ ದ್ವೀಪದವರಿಂದ ಉತ್ಪನ್ನರಾದ ಫಿಲಿಷ್ಟಿಯರನ್ನು ಯೆಹೋವನೇ ಸೂರೆಮಾಡುವನು.
5 “ಗಾಜಾ ಊರು ಬೋಳಿಸಿಕೊಂಡಿದೆ, ಅಷ್ಕೆಲೋನ್ ನಾಶಹೊಂದಿದೆ; ಫಿಲಿಷ್ಟಿಯದ ಬಯಲು ಸೀಮೆಯಲ್ಲಿ ಉಳಿದ ಪಟ್ಟಣವೇ, ನಿನ್ನನ್ನು ಎಂದಿನ ವರೆಗೆ ಕತ್ತರಿಸಿಕೊಳ್ಳುತ್ತಿರುವಿ? 6 ಅಯ್ಯೋ, ಯೆಹೋವನ ಖಡ್ಗವೇ, ಇನ್ನೆಷ್ಟರವರೆಗೆ ವಿಶ್ರಾಂತಿಗೊಳ್ಳದೆ ಇರುವಿ? ನಿನ್ನನ್ನು ಒರೆಯಲ್ಲಿ ಅಡಗಿಸಿಕೋ! ಶಾಂತವಾಗಿ, ಸುಮ್ಮನಿರು! 7 ಖಡ್ಗವು ವಿಶ್ರಾಂತಿಗೊಳ್ಳುವುದು ಹೇಗೆ? ಅಷ್ಕೆಲೋನಿನ ಮತ್ತು ಕರಾವಳಿಯ ವಿಷಯವಾಗಿ ಯೆಹೋವನು ಅದಕ್ಕೆ ಅಪ್ಪಣೆಕೊಟ್ಟನಲ್ಲಾ; ಅಲ್ಲಿಗೆ ಅದನ್ನು ನೇಮಿಸಿದ್ದಾನೆ.”