14
ಯೆಹೋವನ ಬರೋಣ ಮತ್ತು ಆಳ್ವಿಕೆ
1 ಆಹಾ, ಚೀಯೋನೇ, ಯೆಹೋವನ ನ್ಯಾಯತೀರ್ಪಿನ ದಿನವು ಬರುತ್ತಿದೆ; ಸೂರೆಯಾದ ನಿನ್ನ ಆಸ್ತಿಯು ಆಗ ನಿನ್ನ ಮಧ್ಯದಲ್ಲಿ ಹಂಚಿಕೆಯಾಗುವುದು.
2 ನಾನು ಸಕಲ ಜನಾಂಗಗಳನ್ನು ಯೆರೂಸಲೇಮಿಗೆ ವಿರುದ್ಧವಾಗಿ ಕೂಡಿಸುವೆನು; ಅವು ಪಟ್ಟಣವನ್ನು ಆಕ್ರಮಿಸಿಕೊಂಡು ಮನೆಗಳನ್ನು ಸೂರೆಮಾಡಿ ಹೆಂಗಸರನ್ನು ಕೆಡಿಸುವವು; ಪಟ್ಟಣದ ಅರ್ಧ ಜನರು ಸೆರೆಗೆ ಹೋಗುವರು, ಉಳಿದ ಜನರೋ ಪಟ್ಟಣದಲ್ಲೇ ಉಳಿಯುವರು. 3 ಆಗ ಯೆಹೋವನು ಹೊರಟು, ಯುದ್ಧದ ದಿನದಲ್ಲಿ ಹೇಗೋ ಹಾಗೆಯೇ ಆ ಜನಾಂಗಗಳಿಗೆ ಪ್ರತಿಭಟಿಸುವನು. 4 ಯೆರೂಸಲೇಮಿನ ಪೂರ್ವದಿಕ್ಕಿಗೆ ಎದುರಾಗಿರುವ ಎಣ್ಣೆಯ ಮರಗಳ ಗುಡ್ಡದ ಮೇಲೆ ಆತನ ಪಾದಗಳು ನಿಂತಿರಲು, ಆ ಗುಡ್ಡವು ಪೂರ್ವದಿಂದ ಪಶ್ಚಿಮದ ಉದ್ದಕ್ಕೂ ಸೀಳಿಹೋಗಿ ಮಧ್ಯದಲ್ಲಿ ದೊಡ್ಡ ಡೊಂಗರವಾಗುವುದು. ಗುಡ್ಡದ ಅರ್ಧಭಾಗವು ಉತ್ತರಕ್ಕೂ, ಅರ್ಧಭಾಗವು ದಕ್ಷಿಣಕ್ಕೂ ಸರಿದುಕೊಳ್ಳುವುದು. 5 ನೀವು ಯೆಹೋವನ* 14:5 ಯೆಹೋವನ ನನ್ನ. ಗುಡ್ಡಗಳ ನಡುವಣ ಆ ಕಣಿವೆಯೊಳಗೆ ಓಡಿಹೋಗುವಿರಿ; ಏಕೆಂದರೆ ಆ ಕಣಿವೆಯು ಆಚೆಲಿನವರೆಗೂ ಮುಟ್ಟಿರುವುದು; ಯೆಹೂದದ ಅರಸನಾದ ಉಜ್ಜೀಯನ ಕಾಲದಲ್ಲಿ ಭೂಕಂಪದ ಕಡೆಯಿಂದ ನೀವು ಓಡಿಹೋದಂತೆಯೇ ಓಡಿಹೋಗುವಿರಿ; ಆಗ ಪರಿಶುದ್ಧ ದೇವರಾದ ಯೆಹೋವನು ಸಮಸ್ತ ದೇವದೂತರ ಸಮೇತ ಬರುವನು.
6 ಆ ದಿನದಲ್ಲಿ ಬೆಳಕಿರದು, ಜ್ಯೋತಿಗಳು ಅಡಗಿಹೋಗುವವು, ಇಂಥಾ ದಿನವು ಒಂದೇ, 7 ಅದು ಯೆಹೋವನಿಗೆ ತಿಳಿದಿರುವುದು, ಅದು ಹಗಲೂ ಅಲ್ಲ, ಇರುಳೂ ಅಲ್ಲ, ಆದರೆ ಸಂಜೆಯ ವೇಳೆಯಲ್ಲಿ ಬೆಳಕಾಗುವುದು.
8 ಆ ದಿನದಲ್ಲಿ ಜೀವಕರವಾದ ಜಲಪ್ರವಾಹವು ಯೆರೂಸಲೇಮಿನೊಳಗಿಂದ ಹೊರಡುವುದು; ಅರ್ಧಭಾಗವು ಪೂರ್ವಸಮುದ್ರಕ್ಕೂ, ಅರ್ಧಭಾಗವು ಪಶ್ಚಿಮ ಸಮುದ್ರಕ್ಕೂ ಹರಿಯುವುದು; ಬೇಸಿಗೆಕಾಲದಲ್ಲಿಯೂ, ಮಳೆಗಾಲದಲ್ಲಿಯೂ ಹರಿಯುತ್ತಲೇ ಇರುವುದು.
9 ಯೆಹೋವನು ಭೂಲೋಕಕ್ಕೆಲ್ಲಾ ರಾಜನಾಗಿರುವನು; ಆ ದಿನದಲ್ಲಿ ಯೆಹೋವನೊಬ್ಬನೇ ದೇವರೆಂದೂ ಆತನ ಹೆಸರೊಂದೇ ಸ್ತುತ್ಯವೆಂದೂ ಎಲ್ಲರಿಗೂ ತಿಳಿದಿರುವುದು.
10 ಆಗ ದೇಶವು ಗೆಬದಿಂದ ಯೆರೂಸಲೇಮಿನ ದಕ್ಷಿಣದಲ್ಲಿರುವ ರಿಮ್ಮೋನಿನವರೆಗೆ ತಗ್ಗಾಗಿ ಮಾರ್ಪಡುವುದು; ಯೆರೂಸಲೇಮೋ ಬೆನ್ಯಾಮೀನಿನ ಬಾಗಿಲಿನಿಂದ ಪೂರ್ವಕಾಲದ ಬಾಗಿಲಿನ ಸ್ಥಳದವರೆಗೆ, ಮೂಲೆಯ ಬಾಗಿಲಿನ ತನಕ, ಹನನೇಲನ ಬುರುಜಿನಿಂದ ಅರಸನ ದ್ರಾಕ್ಷಿಯ ಆಲೆಗಳವರೆಗೂ ಎತ್ತರದಲ್ಲಿ ನಿಂತಿರುವುದು. 11 ಅದರಲ್ಲಿ ಜನರು ಸುರಕ್ಷಿತವಾಗಿ ವಾಸಿಸುವರು. ಇನ್ನು ಶಾಪವಿರದು; ಯೆರೂಸಲೇಮ್ ನೆಮ್ಮದಿಯಾಗಿ ನೆಲೆಗೊಂಡಿರುವುದು.
12 ಯೆರೂಸಲೇಮಿನ ಮೇಲೆ ಯುದ್ಧ ಮಾಡಿದ ಸಕಲ ಜನಾಂಗಗಳಿಗೂ ಯೆಹೋವನು ಈ ವ್ಯಾಧಿಯು ಬರುವಂತೆ ಮಾಡುವನು, ಹೆಜ್ಜೆಯ ಮೇಲೆ ನಿಂತ ಹಾಗೆಯೇ ಅವರ ಮಾಂಸವು ಕೊಳೆತು ಹೋಗುವುದು, ಕಣ್ಣು ಕುಣಿಯಲ್ಲೇ ಇಂಗುವುದು, ನಾಲಿಗೆಯು ಬಾಯಲ್ಲೇ ಕ್ಷಯಿಸುವುದು. 13 ಆ ದಿನದಲ್ಲಿ ಯೆಹೋವನು ಉಂಟುಮಾಡುವ ದೊಡ್ಡ ಗಲಿಬಿಲಿಯು ಅವರಲ್ಲಿ ಹರಡುವುದು; ಒಬ್ಬರ ಕೈಯನೊಬ್ಬರು ತಡೆಹಿಡಿಯುವರು, ಒಬ್ಬರ ಮೇಲೊಬ್ಬರು ಕೈಯೆತ್ತುವರು. 14 ಯೆಹೂದವೂ ಯೆರೂಸಲೇಮಿನ ಪರವಾಗಿ ಯುದ್ಧಮಾಡುವುದು; ಸುತ್ತಣ ಸಕಲ ಜನಾಂಗಗಳ ಆಸ್ತಿಯು ಅಂದರೆ ಬೆಳ್ಳಿ, ಬಂಗಾರ ಮತ್ತು ಬಟ್ಟೆಗಳು ರಾಶಿರಾಶಿಯಾಗಿ ಕೂಡಿಸಲ್ಪಡುವವು. 15 ಜನಾಂಗಗಳಿಗೆ ತಗಲುವಂಥ ವ್ಯಾಧಿಯೇ ಕುದುರೆ, ಹೇಸರಗತ್ತೆ, ಒಂಟೆ, ಕತ್ತೆ ಅಂತು ಆ ಪಾಳೆಯಗಳಲ್ಲಿನ ಸಮಸ್ತ ಪಶುಗಳಿಗೂ ತಗಲುವುದು.
16 ಅನಂತರ ಯೆರೂಸಲೇಮಿನ ಮೇಲೆ ಬಿದ್ದ ಸಕಲ ಜನಾಂಗಗಳಲ್ಲಿ ಉಳಿದವರೆಲ್ಲರೂ ಸೇನಾಧೀಶ್ವರ ಯೆಹೋವನೆಂಬ ರಾಜಾಧಿರಾಜನನ್ನು ಆರಾಧಿಸುವುದಕ್ಕೂ, ಪರ್ಣಶಾಲೆಗಳ ಹಬ್ಬವನ್ನು ಆಚರಿಸುವುದಕ್ಕೂ ಪ್ರತಿವರ್ಷವೂ ಹೊರಟುಬರುವರು. 17 ಲೋಕದ ಸಮಸ್ತ ಕುಲಗಳಲ್ಲಿ ಯಾವ ಕುಲದವರು ಸೇನಾಧೀಶ್ವರನಾದ ಯೆಹೋವನೆಂಬ ರಾಜಾಧಿರಾಜನನ್ನು ಆರಾಧಿಸುವುದಕ್ಕೆ ಯೆರೂಸಲೇಮಿಗೆ ಬರುವುದಿಲ್ಲವೋ ಅವರಿಗೆ ಮಳೆಬರುವುದಿಲ್ಲ. 18 ಐಗುಪ್ತ ಕುಲದವರು ಹೊರಟು ಬರದಿದ್ದರೆ, ಪರ್ಣಶಾಲೆಗಳ ಹಬ್ಬವನ್ನು ಆಚರಿಸುವುದಕ್ಕೆ ಬರದಿದ್ದರೆ ಜನಾಂಗಗಳಿಗೆ ಯೆಹೋವನು ತಗಲಿಸುವ ಬಾಧೆಯು ಅವರಿಗೂ ತಗಲುವುದು. 19 ಐಗುಪ್ತಕ್ಕೂ ಪರ್ಣಶಾಲೆಗಳ ಹಬ್ಬವನ್ನು ಆಚರಿಸುವುದಕ್ಕೆ ಬರದಿರುವ ಸಕಲ ಜನಾಂಗಗಳಿಗೂ ಸಂಭವಿಸುವ ದಂಡನೆಯು ಇದೇ.
ಯೆರೂಸಲೇಮಿನ ಪೂರ್ಣಪರಿಶುದ್ಧತೆ
20 ಆ ದಿನದಲ್ಲಿ, “ಯೆಹೋವನಿಗೆ ಮೀಸಲು” ಎಂಬ ಲಿಪಿಯು ಕುದುರೆಗಳ ಘಂಟೆಗಳ ಮೇಲೂ ಕೆತ್ತಿರುವುದು; ಯೆಹೋವನ ಆಲಯದ ಪಾತ್ರೆಗಳೆಲ್ಲವೂ ಯಜ್ಞವೇದಿಯ ಪಕ್ಕದ ಬೋಗುಣಿಗಳಂತೆ ಪರಿಶುದ್ಧವಾಗಿರುವವು. 21 ಅಲ್ಲದೆ ಯೆರೂಸಲೇಮಿನಲ್ಲಿಯೂ, ಯೆಹೂದದಲ್ಲಿಯೂ ಇರುವ ಸಕಲ ಪಾತ್ರೆಗಳು ಸೇನಾಧೀಶ್ವರ ಯೆಹೋವನಿಗೆ ಮೀಸಲಾಗಿರುವವು; ಯಜ್ಞಮಾಡುವವರೆಲ್ಲರು ಬಂದು ಅವುಗಳನ್ನು ತೆಗೆದುಕೊಂಡು ಆ ಪಾತ್ರೆಗಳಲ್ಲಿ ಬೇಯಿಸುವರು; ಆ ದಿನದಲ್ಲಿ ಸೇನಾಧೀಶ್ವರ ಯೆಹೋವನ ಆಲಯದೊಳಗೆ ಯಾವ ವ್ಯಾಪಾರಿಯೂ† 14:21 ವ್ಯಾಪಾರಿಯೂ ಅಥವಾ ಕಾನಾನ್ಯನೂ. ಇರುವುದಿಲ್ಲ.