56
ಶತ್ರುಪೀಡಿತರಾದ ಭಕ್ತರ ಪ್ರಾರ್ಥನೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಯೋನತ್ ಎಲೆಮ್ ರೆಹೋಕೀಮ್ ಎಂಬ ರಾಗ; ದಾವೀದನು ಗತ್ ಎಂಬ ಊರಲ್ಲಿ ಫಿಲಿಷ್ಟಿಯರ ಕೈವಶವಾದಾಗ ರಚಿಸಿದ ಕಾವ್ಯ.
1 ದೇವರೇ, ಕರುಣಿಸು; ನರರು ನನ್ನನ್ನು ತುಳಿದುಬಿಡಬೇಕೆಂದು ಎದ್ದಿದ್ದಾರೆ.
ನನ್ನ ಎದುರಾಳಿಗಳು ಹಗಲೆಲ್ಲಾ ಯುದ್ಧಕ್ಕೆ ನಿಂತು ಬಾಧಿಸುತ್ತಾರೆ.
2 ಹೊಂಚುಹಾಕಿ ನನ್ನನ್ನು ನುಂಗಿಬಿಡಬೇಕೆಂದು ಯಾವಾಗಲೂ ಬಾಯ್ದೆರೆದಿದ್ದಾರೆ;
ಸೊಕ್ಕಿನಿಂದ ನನ್ನ ಮೇಲೆ ಯುದ್ಧಕ್ಕೆ ನಿಂತವರು ಎಷ್ಟೋ ಜನರು.
3 ನನಗೆ ಹೆದರಿಕೆಯುಂಟಾದಾಗ ನಿನ್ನನ್ನೇ ಆಶ್ರಯಿಸಿಕೊಳ್ಳುವೆನು.
4 ದೇವರ ವಾಗ್ದಾನಕ್ಕೋಸ್ಕರ ಆತನಲ್ಲಿಯೇ ಹೆಚ್ಚಳಪಡುವೆನು;
ದೇವರನ್ನು ನಂಬಿ ನಿರ್ಭಯದಿಂದಿರುವೆನು.
ನರಪ್ರಾಣಿಗಳು ನನಗೆ ಏನು ಮಾಡಾರು?
5 ಹಗಲೆಲ್ಲಾ ನನ್ನ ಮಾತುಗಳನ್ನು ಅಪಾರ್ಥಮಾಡುತ್ತಾರೆ;
ಅವರು ಬಗೆಯುವುದೆಲ್ಲ ನನಗೆ ಕೇಡೇ.
6 ಅವರು ಒಟ್ಟುಗೂಡಿ ನನ್ನ ಜೀವ ತೆಗೆಯಬೇಕೆಂದು ಹೊಂಚುಹಾಕಿ,
ನನ್ನ ಹೆಜ್ಜೆಜಾಡು ಹಿಡಿದು ಬರುತ್ತಾರೆ.
7 ಇಂಥ ಅನ್ಯಾಯಗಾರರು ತಪ್ಪಿಸಿಕೊಳ್ಳಬಹುದೋ?
ದೇವರೇ, ರೌದ್ರದಿಂದ ಆ ಜನಾಂಗಗಳನ್ನು ಉರುಳಿಸಿಬಿಡು.
8 ನಾನು ದೇಶಭ್ರಷ್ಟನಾಗಿ ಅಲೆದಾಡಿದ್ದನ್ನು ನೀನೇ ಬಲ್ಲೆ.
ನನ್ನ ಕಣ್ಣೀರು ನಿನ್ನ ಬುದ್ದಲಿಯಲ್ಲಿ ತುಂಬಿದೆಯಲ್ಲಾ;
ಅದರ ವಿಷಯವಾಗಿ ನಿನ್ನ ಪುಸ್ತಕದಲ್ಲಿ ಬರೆದದೆಯಲ್ಲಾ.
9 ನಾನು ಆತನಿಗೆ ಮೊರೆಯಿಡುವಾಗಲೇ ನನ್ನ ಶತ್ರುಗಳು ಫಕ್ಕನೆ ಹಿಂದಿರುಗಿ ಓಡುವರು;
* 56:9 ಅಥವಾ ನನಗೆ ಇದು ತಿಳಿದಿದೆ ಯಾಕೆಂದರೆ ದೇವರು ನನ್ನ ಕಡೆಯಲ್ಲಿದ್ದಾನೆ.ದೇವರು ನನ್ನ ಸಂಗಡ ಇರುವುದು ನಿಶ್ಚಯ.
10 ದೇವರ ವಾಗ್ದಾನಗಳಲ್ಲಿ ಹಾಡಿ ಹರಸುತ್ತೇನೆ.
ಯೆಹೋವನ ವಾಗ್ದಾನಗಳಲ್ಲಿ ಹಾಡಿ ಹರಸುತ್ತೇನೆ.
11 ದೇವರನ್ನು ನಂಬಿ ನಿರ್ಭಯದಿಂದಿರುವೆನು;
ನರಪ್ರಾಣಿಗಳು ನನಗೆ ಏನು ಮಾಡಾರು?
12 ದೇವರೇ, ನಿನಗೆ ಹೊತ್ತ ಹರಕೆಗಳನ್ನು ನಾನು ಸಲ್ಲಿಸುವೆನು;
ಕೃತಜ್ಞತಾ ಯಜ್ಞಗಳನ್ನು ನಿನಗೆ ಸಮರ್ಪಿಸುವೆನು.
13 ಏಕೆಂದರೆ, ನಾನು ಜೀವದಿಂದ ಬೆಳಕಿನಲ್ಲಿದ್ದು ನಿನಗೆ ನಡೆದುಕೊಳ್ಳಬೇಕೆಂದು
ನೀನು ನನ್ನ ಪ್ರಾಣವನ್ನು ಮರಣಕ್ಕೆ ತಪ್ಪಿಸಿ,
ನನ್ನ ಪಾದಗಳನ್ನು ಎಡವಿಬೀಳದಂತೆ ಕಾಪಾಡಿದ್ದಿ.