5
ಭಕ್ತ ರಕ್ಷಕನಾದ ಯೆಹೋವನಿಗೆ ಉದಯಕೀರ್ತನೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ರಂಧ್ರವಾದ್ಯದೊಡನೆ ಹಾಡತಕ್ಕ ದಾವೀದನ ಕೀರ್ತನೆ.
ಯೆಹೋವನೇ ನನ್ನ ಮೊರೆಗೆ ಕಿವಿಗೊಡು;
ನನ್ನ ನರಳಾಟವನ್ನು ಲಕ್ಷ್ಯಕ್ಕೆ ತಂದುಕೋ.
ನನ್ನ ಅರಸನೇ, ನನ್ನ ದೇವರೇ, ನಿನ್ನನ್ನೇ ಪ್ರಾರ್ಥಿಸುವೆನು;
ನನ್ನ ಮೊರೆಯನ್ನು ಆಲಿಸು.
ಯೆಹೋವನೇ, ಉದಯಕಾಲದಲ್ಲಿ ನನ್ನ ಸ್ವರವು ನಿನಗೆ ಕೇಳಿಸುವುದು;
ಉದಯಕಾಲದಲ್ಲಿಯೇ ನನ್ನ * 5:3 ಅಥವಾ ಯಜ್ಞವನ್ನು.ಪ್ರಾರ್ಥನೆಯನ್ನು ನಿನಗೆ ಸಮರ್ಪಿಸಿ,
ನಿನ್ನಿಂದ ಸದುತ್ತರವನ್ನು ಎದುರುನೋಡುತ್ತಿರುವೆನು.
ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ;
ಕೆಟ್ಟದ್ದು ನಿನ್ನ ಬಳಿಯಲ್ಲಿ ತಂಗಲಾರದು.
ಸೊಕ್ಕಿನವರು ನಿನ್ನ ಸನ್ನಿಧಿಯಲ್ಲಿ ನಿಲ್ಲಲಾರರು;
ಅಧರ್ಮಿಗಳೆಲ್ಲರನ್ನು ನೀನು ಹಗೆಮಾಡುವಿ.
ಸುಳ್ಳು ಹೇಳುವವರನ್ನು ನಾಶಮಾಡುವಿ;
ಯೆಹೋವನೇ, ನರಹತ್ಯ ಮಾಡುವವರು ಮತ್ತು ಕಪಟಿಗಳು ನಿನಗೆ ಅಸಹ್ಯರಾಗಿದ್ದಾರೆ.
ನಾನಂತು ನಿನ್ನ ಮಹಾಕೃಪೆಯನ್ನು ಹೊಂದಿದವನಾಗಿ
ನಿನ್ನ ಮಂದಿರದೊಳಕ್ಕೆ ಪ್ರವೇಶಿಸುವೆನು;
ನಿನ್ನಲ್ಲಿಯೇ ಭಯಭಕ್ತಿಯುಳ್ಳವನಾಗಿ,
ನಿನ್ನ ಪರಿಶುದ್ಧ ಆಲಯದ ಕಡೆಗೆ ಅಡ್ಡಬೀಳುವೆನು.
ಯೆಹೋವನೇ, ವಿರೋಧಿಗಳು ನನಗೆ ಕೇಡನ್ನೇ ಹಾರೈಸುತ್ತಿರುವುದರಿಂದ
ನಿನ್ನ ನೀತಿಗೆ ಸರಿಯಾಗಿ ನನ್ನನ್ನು ನಡೆಸು;
ನನ್ನ ಮುಂದೆ ನಿನ್ನ ಮಾರ್ಗವನ್ನು ಸರಾಗಮಾಡು.
ಅವರ ಬಾಯಲ್ಲಿ ಯಥಾರ್ಥತ್ವವಿಲ್ಲ;
ಅವರು ನಾಲಿಗೆಯಿಂದ ಸವಿಮಾತನಾಡಿದರೂ,
ಅವರ ಹೃದಯವು ನಾಶಕರವಾದ ಗುಂಡಿ,
ಅವರ ಗಂಟಲು ತೆರೆದಿರುವ ಸಮಾಧಿ.
10 ದೇವರೇ, ಅವರು ನಿನಗೆ ವಿರುದ್ಧವಾಗಿ ತಿರುಗಿಬಿದ್ದವರು;
ಆದುದರಿಂದ ಅವರನ್ನು ಅಪರಾಧಿಗಳೆಂದು ನಿರ್ಣಯಿಸು;
ಅವರು ತಮ್ಮ ಕುಯುಕ್ತಿಯಿಂದಲೇ ಮೋಸ ಹೋಗಲಿ;
ಅವರ ದ್ರೋಹವು ಅಪಾರವಾಗಿರುವುದರಿಂದ ಅವರನ್ನು ತಳ್ಳಿಬಿಡು.
11 ನಿನ್ನನ್ನು ಮೊರೆಹೊಕ್ಕವರೆಲ್ಲರು ನಿನ್ನಲ್ಲಿ ಸಂತೋಷಪಡುವರು;
ನೀನು ಕಾಪಾಡುವವನೆಂದು ಅವರು ಯಾವಾಗಲೂ ಆನಂದ ಧ್ವನಿಮಾಡುವರು.
ನಿನ್ನ ನಾಮವನ್ನು ಪ್ರೀತಿಸುವವರು ನಿನ್ನಲ್ಲಿ ಉಲ್ಲಾಸಗೊಳ್ಳುವರು.
12 ಯೆಹೋವನೇ, ನೀತಿವಂತನನ್ನು ಆಶೀರ್ವದಿಸುವವನು ನೀನೇ;
ನಿನ್ನ ದಯವು ದೊಡ್ಡ ಗುರಾಣಿಯಂತೆ ಅವನನ್ನು ಆವರಿಸಿಕೊಳ್ಳುವುದು.

*5:3 5:3 ಅಥವಾ ಯಜ್ಞವನ್ನು.