6
ಮಾತುಕೊಡುವುದರಲ್ಲಿ ಎಚ್ಚರಿಕೆ
1 ಮಗನೇ, ನೀನು ನೆರೆಯವನ ಸಾಲಕ್ಕೆ ಹೊಣೆಯಾಗಿದ್ದರೆ,
ಪರನೊಂದಿಗೆ ಪ್ರಮಾಣ ಮಾಡಿಕೊಂಡಿದ್ದರೆ,
2 ನೀನು ಮಾತುಕೊಟ್ಟು ಪಾಶಕ್ಕೆ ಸಿಕ್ಕಿಕೊಂಡಿದ್ದೀ,
ನಿನ್ನ ವಾಗ್ದಾನವು ನಿನ್ನನ್ನು ಹಿಡಿದಿದೆ.
3 ಹೀಗಿರಲು, ಮಗನೇ, ನೀನು ನೆರೆಯವನ ಕೈಗೆ ಸಿಕ್ಕಿಕೊಂಡದ್ದರಿಂದ ತಪ್ಪಿಸಿಕೊಳ್ಳುವ ಒಂದು ಕೆಲಸ ಮಾಡು,
ನಡೆ, ತ್ವರೆಪಡು, ಆ ನೆರೆಯವನನ್ನು ಅಂಗಲಾಚಿ ಬೇಡಿಕೋ,
4 ನಿನ್ನ ಕಣ್ಣುಗಳಿಗೆ ನಿದ್ರೆಕೊಡಬೇಡ,
ನಿನ್ನ ರೆಪ್ಪೆಗಳನ್ನು ಮುಚ್ಚಬೇಡ;
5 ಬೇಟೆಗಾರನ ಕೈಯಿಂದ ಜಿಂಕೆಯು ಓಡುವಂತೆಯೂ,
ಪಕ್ಷಿಯು ಹಾರಿ ಹೋಗುವ ಹಾಗೂ ತಪ್ಪಿಸಿಕೋ.
ಸೋಮಾರಿಯಾಗಿರಬೇಡ
6 ಸೋಮಾರಿಯೇ, ಇರುವೆಯ ಹತ್ತಿರ ಹೋಗಿ,
ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ಪಡೆದುಕೋ.
7 ಅದಕ್ಕೆ ನಾಯಕ, ಅಧಿಕಾರಿ ಹಾಗೂ ಪ್ರಭುಗಳಿಲ್ಲದಿದ್ದರೂ,
8 ಬೇಸಿಗೆಯಲ್ಲಿ ತನ್ನ ತೀನಿಯನ್ನು ಸಿದ್ಧಮಾಡುವುದು,
ಸುಗ್ಗಿಯ ಕಾಲದಲ್ಲಿ ತನಗೆ ಬೇಕಾದಷ್ಟು ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವುದು.
9 ಸೋಮಾರಿಯೇ, ಎಷ್ಟು ಹೊತ್ತು ನಿದ್ರೆ?
ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವಿ?
10 “ಇನ್ನು ಸ್ವಲ್ಪ ನಿದ್ದೆ, ಇನ್ನು ಸ್ವಲ್ಪ ತೂಕಡಿಕೆ,
ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ” ಅಂದುಕೊಳ್ಳುವಿಯಾ?
11 ಬಡತನವು ದಾರಿಗಳ್ಳನ ಹಾಗೂ
ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು.
12 ನೀಚನೂ, ದುಷ್ಟನೂ ಆಗಿರುವ ಮನುಷ್ಯನ ನಡತೆಯನ್ನು ನೋಡು,
ಅವನು ವಕ್ರ ಮಾತಿನವನಾಗಿದ್ದಾನೆ,
13 ಕಣ್ಣನ್ನು ಮಿಟಕಿಸುತ್ತಾನೆ, ಕಾಲಿನಿಂದ ಕೆರೆಯುತ್ತಾನೆ,
ಬೆರಳ ಸನ್ನೆಮಾಡುತ್ತಾನೆ.
14 ಅವನ ಮನಸ್ಸಿನಲ್ಲಿರುವುದು ದ್ರೋಹವೇ;
ಯಾವಾಗಲೂ ಕೇಡನ್ನು ಕಲ್ಪಿಸುತ್ತಾನೆ,
ಜಗಳದ ಬೀಜವನ್ನು ಬಿತ್ತುತ್ತಾನೆ.
15 ಆದಕಾರಣ ಅವನಿಗೆ ತಟ್ಟನೆ ವಿಪತ್ತು ಸಂಭವಿಸುವುದು,
ಏಳದ ಹಾಗೆ ಫಕ್ಕನೆ ಮುರಿಯಲ್ಪಡುವನು.
16 ಯೆಹೋವನು ಹಗೆಮಾಡುವ ವಿಷಯಗಳು ಆರು ಇವೆ,
ಹೌದು, ಏಳು ಸಂಗತಿಗಳು ಆತನಿಗೆ ಅಸಹ್ಯವಾಗಿ ತೋರುತ್ತವೆ.
17 ಅವು ಯಾವುವೆಂದರೆ, ಹೆಮ್ಮೆಯ ಕಣ್ಣು, ಸುಳ್ಳಿನ ನಾಲಿಗೆ,
ನಿರ್ದೋಷಿಗಳ ರಕ್ತವನ್ನು ಸುರಿಸುವ ಕೈ,
18 ದುರಾಲೋಚನೆಗಳನ್ನು ಕಲ್ಪಿಸುವ ಹೃದಯ,
ಕೇಡುಮಾಡಲು ತ್ವರೆಪಡುವ ಕಾಲು,
19 ಅಸತ್ಯವಾಡುವ ಸುಳ್ಳುಸಾಕ್ಷಿ ಮತ್ತು
ಒಡಹುಟ್ಟಿದವರಲ್ಲಿ ಜಗಳಗಳನ್ನು ಬಿತ್ತುವವನು ಇವುಗಳೇ.
ಪರಸ್ತ್ರೀಯರ ಸಹವಾಸದ ಬಗ್ಗೆ ಎಚ್ಚರಿಕೆ
20 ಕಂದಾ, ತಂದೆಯ ಆಜ್ಞೆಯನ್ನು ಕೈಕೊಳ್ಳು,
ತಾಯಿಯ ಉಪದೇಶವನ್ನು ಬಿಡಬೇಡ.
21 ಅವುಗಳನ್ನು ಸದಾ ನಿನ್ನ ಹೃದಯದಲ್ಲಿ ಇಟ್ಟುಕೋ,
ನಿನ್ನ ಕೊರಳಿಗೆ ಅವುಗಳನ್ನು ಧರಿಸಿಕೋ.
22 ನೀನು ನಡೆಯುವಾಗ ಆ ಉಪದೇಶವು ನಿನ್ನನ್ನು ಮುನ್ನಡೆಸುವುದು,
ಮಲಗಿಕೊಂಡಾಗ ಅದು ನಿನ್ನನ್ನು ಕಾಯುವುದು,
ಎಚ್ಚರಗೊಂಡಾಗ ನಿನ್ನೊಂದಿಗೆ ಮಾತನಾಡುವುದು.
23 ಆಜ್ಞೆಯೇ ದೀಪ, ಉಪದೇಶವೇ ಬೆಳಕು,
ಶಿಕ್ಷಣಪೂರ್ವಕವಾದ ಬೋಧನೆಯೇ ಜೀವದ ಮಾರ್ಗ.
24 ಅದು ಕೆಟ್ಟ ಸ್ತ್ರೀಯಿಂದಲೂ,
ವೇಶ್ಯೆಯ ಸಿಹಿನುಡಿಯಿಂದಲೂ ನಿನ್ನನ್ನು ರಕ್ಷಿಸತಕ್ಕದ್ದಾಗಿದೆ.
25 ನಿನ್ನ ಹೃದಯವು ಅವಳ ಸೌಂದರ್ಯವನ್ನು ಮೋಹಿಸದಿರಲಿ,
ಅವಳು ತನ್ನ ಕಣ್ಣುರೆಪ್ಪೆಗಳಿಂದ ನಿನ್ನನ್ನು ವಶಮಾಡಿಕೊಂಡಾಳು, ನೋಡಿಕೋ.
26 ವೇಶ್ಯೆಯಿಂದ ಯಾವನಿಗಾದರೂ ಒಂದು ರೊಟ್ಟಿ ಮಾತ್ರ ಗತಿಯಾಗುವುದು,
ಪರಸ್ತ್ರೀಯೋ ಅಮೂಲ್ಯವಾದ ಜೀವವನ್ನು ಬೇಟೆಯಾಡುವಳು.
27 ಮಡಿಲಲ್ಲಿ ಬೆಂಕಿಯನ್ನು ಇಟ್ಟುಕೊಂಡರೆ
ಬಟ್ಟೆ ಸುಡುವುದಿಲ್ಲವೋ?
28 ಧಗಧಗಿಸುವ ಕೆಂಡದ ಮೇಲೆ ನಡೆದರೆ
ಕಾಲು ಬೇಯುವುದಿಲ್ಲವೋ?
29 ನೆರೆಯವನ ಹೆಂಡತಿಯ ಹತ್ತಿರ ಹೋಗುವವನಿಗೆ ಹೀಗೆಯೇ ಆಗುವುದು,
ಯಾರು ಅವಳನ್ನು ಮುಟ್ಟುವನೋ ಅವನು ದಂಡನೆಯನ್ನು ಹೊಂದದೇ ಇರನು.
30 ಕಳ್ಳನು ಹೊಟ್ಟೆಗಿಲ್ಲದೆ ಹಸಿವೆಯನ್ನು ನೀಗಿಸಲು ಕಳವು ಮಾಡಿದರೆ
ಜನರು ಅಷ್ಟೇನೂ ಹೀಯಾಳಿಸರು.
31 ಅವನ ತಪ್ಪು ಬಯಲಾದರೆ ಅವನು ಏಳರಷ್ಟು ಕೊಡಬೇಕಾಗುವುದು,
ಅಥವಾ ತನ್ನ ಮನೆಯ ಆಸ್ತಿಯನ್ನೆಲ್ಲಾ ಕೊಟ್ಟು ತೀರಿಸಲೇಬೇಕು.
32 ವ್ಯಭಿಚಾರಿಯೋ ಕೇವಲ ಬುದ್ಧಿಹೀನನು,
ಇಂಥಾ ಕಾರ್ಯವನ್ನು ಮಾಡುವವನು ತನ್ನನ್ನೇ ನಾಶಪಡಿಸಿಕೊಳ್ಳುವನು.
33 ಅವನಿಗೆ ಗಾಯವೂ, ಅವಮಾನವೂ ಆಗುವವು,
ಅವನ ಕೆಟ್ಟ ಹೆಸರು ಎಂದಿಗೂ ಅಳಿಸಲ್ಪಡದು.
34 ಏಕೆಂದರೆ ಮತ್ಸರವು ಪತಿಗೆ ಕ್ರೋಧವನ್ನು ಉಂಟುಮಾಡುತ್ತದೆ,
ಅವನು ಮುಯ್ಯಿತೀರಿಸತಕ್ಕ ದಿನದಲ್ಲಿ ವ್ಯಭಿಚಾರಿಯನ್ನು ಉಳಿಸನು.
35 ಅವನು ಯಾವ ಈಡನ್ನೂ ಮುಟ್ಟನು; ಎಷ್ಟು ಲಂಚಕೊಟ್ಟರೂ ಒಪ್ಪನು.