17
ಯಜ್ಞಪಶುಗಳನ್ನು ದೇವಸ್ಥಾನದಲ್ಲಿಯೇ ವಧಿಸಬೇಕೆಂಬ ನಿಯಮ
ಯೆಹೋವನು ಮೋಶೆಯೊಂದಿಗೆ ಮಾತನಾಡಿ, “ನೀನು ಆರೋನನಿಗೂ ಅವನ ಮಕ್ಕಳಿಗೂ ಮತ್ತು ಇಸ್ರಾಯೇಲರಿಗೂ ಹೀಗೆ ಹೇಳಬೇಕು, ಯೆಹೋವನು ಆಜ್ಞಾಪಿಸುವುದೇನೆಂದರೆ, ‘ಇಸ್ರಾಯೇಲರಲ್ಲಿ ಯಾವನಾದರೂ ಹೋರಿಯನ್ನಾಗಲಿ, ಕುರಿಯನ್ನಾಗಲಿ ಅಥವಾ ಆಡನ್ನಾಗಲಿ ಕೊಯ್ಯುವಾಗ, ಅದನ್ನು ಯೆಹೋವನಿಗೆ ಸಮರ್ಪಿಸುವುದಕ್ಕಾಗಿ ಆತನ ಗುಡಾರದ ಬಾಗಿಲಿಗೆ ತಾರದೆ, ಪಾಳೆಯದ ಒಳಗಾಗಲಿ ಅಥವಾ ಹೊರಗಾಗಲಿ ವಧಿಸಿದರೆ ಅವನನ್ನು ಕೊಲೆಪಾತಕನೆಂದು ನೀವು ನಿರ್ಣಯಿಸಬೇಕು. ಅವನು ರಕ್ತವನ್ನು ಸುರಿಸಿದವನಾದುದರಿಂದ ಕುಲದಿಂದ ಹೊರಗೆ ಹಾಕಬೇಕು. ಏಕೆಂದರೆ ಯಜ್ಞಪಶುಗಳನ್ನು ಬಯಲಿನಲ್ಲಿ ವಧಿಸುತ್ತಿದ್ದ ಇಸ್ರಾಯೇಲರು ಇನ್ನು ಮೇಲೆ ಅವುಗಳನ್ನು ದೇವದರ್ಶನದ ಗುಡಾರದ ಬಾಗಿಲಿಗೆ ಯಾಜಕನ ಬಳಿಗೆ ತಂದು, ಯೆಹೋವನ ಮುಂದೆ ಸಮಾಧಾನಯಜ್ಞವಾಗಿ ಯೆಹೋವನಿಗೆ ಸಮರ್ಪಿಸಬೇಕು. ಯಾಜಕನು ಅವುಗಳ ರಕ್ತವನ್ನು ದೇವದರ್ಶನದ ಗುಡಾರದ ಬಾಗಿಲಿನ ಮುಂದಿರುವ ಯಜ್ಞವೇದಿಗೆ ಎರಚಿ, ಅವುಗಳ ಕೊಬ್ಬನ್ನು ಹೋಮಮಾಡಿ ಯೆಹೋವನಿಗೆ ಪರಿಮಳವನ್ನು ಉಂಟುಮಾಡಬೇಕು. ಅವರು ಇದುವರೆಗೆ ಪೂಜಿಸುತ್ತಿದ್ದ * 17:7 ಆಡುಗಳ ವಿಗ್ರಹ.ಅಜದೇವತೆಗಳಿಗೆ ಇನ್ನು ಮುಂದೆ ಬಲಿಕೊಟ್ಟು 17:7 ಅಕ್ಷರಶಃವಾಗಿ ವ್ಯಭಿಚಾರಿಗಳಂತೆ ವರ್ತಿಸುವುದು.ದೇವದ್ರೋಹಿಗಳಾಗಬಾರದು. ಅವರಿಗೂ ಮತ್ತು ಅವರ ಸಂತತಿಯವರಿಗೂ ಇದು ಶಾಶ್ವತನಿಯಮ.’
ರಕ್ತವನ್ನು ಭುಜಿಸಲೇ ಬಾರದೆಂಬ ನಿಯಮ
“ಇದಲ್ಲದೆ ನೀನು ಅವರಿಗೆ ಹೀಗೆ ಆಜ್ಞಾಪಿಸು, ‘ಇಸ್ರಾಯೇಲರಲ್ಲಾಗಲಿ ಅಥವಾ ಅವರ ನಡುವೆ ವಾಸಮಾಡುತ್ತಿರುವ ಅನ್ಯದೇಶದವರಲ್ಲಿಯಾಗಲಿ ಯಾರಾದರೂ ಸರ್ವಾಂಗಹೋಮವನ್ನು ಅಥವಾ, ಬೇರೆ ವಿಧವಾದ ಯಜ್ಞವನ್ನು ಮಾಡುವಾಗ ಅದರ ಪಶುವನ್ನು ಯೆಹೋವನಿಗೆ ಸಮರ್ಪಿಸುವುದಕ್ಕಾಗಿ ದೇವದರ್ಶನದ ಗುಡಾರದ ಬಾಗಿಲಿಗೆ ತೆಗೆದುಕೊಂಡು ಬಾರದಿದ್ದರೆ ಅವನು ಕುಲದಿಂದ ಹೊರಗೆ ಹಾಕಬೇಕು.
10 “ ‘ಇದಲ್ಲದೆ ಇಸ್ರಾಯೇಲರಲ್ಲಾಗಲಿ ಅಥವಾ ಅವರ ನಡುವೆ ವಾಸವಾಗಿರುವ ಅನ್ಯದೇಶದವರಲ್ಲಾಗಲಿ ಯಾವನಾದರೂ ರಕ್ತಭೋಜನಮಾಡಿದರೆ ನಾನು ಆತನ ಮೇಲೆ ಉಗ್ರವಾದ ಕೋಪವನ್ನು ಮಾಡಿ ಅವನನ್ನು ಕುಲದಿಂದ ತೆಗೆದುಹಾಕುವೆನು. 11 ಏಕೆಂದರೆ ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರ. ಅಂತಹ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮಗೋಸ್ಕರ ದೋಷಪರಿಹಾರ ಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರವಾಗಿರುವ ಕಾರಣ ಅದರಿಂದ ದೋಷಪರಿಹಾರ ಆಗುತ್ತದಷ್ಟೆ. 12 ಆದುದರಿಂದ ನಿಮ್ಮಲ್ಲಿಯಾಗಲಿ ಅಥವಾ ನಿಮ್ಮ ನಡುವೆ ವಾಸವಾಗಿರುವ ಅನ್ಯದೇಶದವರಲ್ಲಾಗಲಿ ಯಾರೂ ರಕ್ತಭೋಜನ ಮಾಡಬಾರದೆಂದು ಇಸ್ರಾಯೇಲರಿಗೆ ಆಜ್ಞಾಪಿಸಿದ್ದೇನೆ.
13 “ ‘ಇಸ್ರಾಯೇಲರಲ್ಲಾಗಲಿ ಅವರ ನಡುವೆ ವಾಸವಾಗಿರುವ ಅನ್ಯದೇಶದವರಲ್ಲಿಯಾಗಲಿ ಯಾವನಾದರೂ ಬೇಟೆಯಾಡಿ ತಿನ್ನತಕ್ಕ ಮೃಗವನ್ನು ಇಲ್ಲವೆ ಪಕ್ಷಿಯನ್ನು ಹಿಡಿದರೆ ಅವನು ಅದರ ರಕ್ತವನ್ನು ಸುರಿಸಿ ಮಣ್ಣಿನಿಂದ ಮುಚ್ಚಿಬಿಡಬೇಕು. 14 ಏಕೆಂದರೆ ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರವು. ಆದಕಾರಣ ನಾನು ಇಸ್ರಾಯೇಲರಿಗೆ, ಪ್ರತಿಪ್ರಾಣಿಗೂ ರಕ್ತವೇ ಪ್ರಾಣಾಧಾರವಾದುದರಿಂದ ನೀವು ಯಾವ ವಿಧವಾದ ಪ್ರಾಣಿಯ ರಕ್ತವನ್ನು ಉಣ್ಣಬಾರದು; ರಕ್ತಭೋಜನ ಮಾಡಿದವನಿಗೆ ಬಹಿಷ್ಕಾರವಾಗಬೇಕೆಂದು ಆಜ್ಞಾಪಿಸಿದ್ದೇನೆ.
15 “ ‘ತಾನಾಗಿ ಸತ್ತುಬಿದ್ದದ್ದನ್ನಾಗಲಿ ಅಥವಾ ಕಾಡುಮೃಗ ಕೊಂದದ್ದನ್ನು ತಿಂದವನಾಗಲಿ ಸ್ವದೇಶದವನಾದರೂ ಇಲ್ಲವೇ ಅನ್ಯದೇಶದವನಾದರೂ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಆ ಸಾಯಂಕಾಲದ ವರೆಗೆ ಅಶುದ್ಧನಾಗಿದ್ದು ಬಳಿಕ ಶುದ್ಧನಾಗುವನು. 16 ಅವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳದೆ ಅಥವಾ ಸ್ನಾನ ಮಾಡದೆ ಹೋದರೆ ತನ್ನ ಪಾಪದ ಫಲವನ್ನು ಅನುಭವಿಸಬೇಕು’ ” ಎಂದು ಹೇಳಿದನು.

*17:7 17:7 ಆಡುಗಳ ವಿಗ್ರಹ.

17:7 17:7 ಅಕ್ಷರಶಃವಾಗಿ ವ್ಯಭಿಚಾರಿಗಳಂತೆ ವರ್ತಿಸುವುದು.