ಪ್ರಲಾಪಗಳು
ಗ್ರಂಥಕರ್ತೃತ್ವ
ಪುಸ್ತಕದೊಳಗೆ ಪ್ರಲಾಪಗಳ ಗ್ರಂಥಕರ್ತನು ಅನಾಮಧೇಯನಾಗಿಯೇ ಉಳಿದಿದ್ದಾನೆ. ಯೆಹೂದ್ಯ ಮತ್ತು ಕ್ರೈಸ್ತ ಸಂಪ್ರದಾಯಗಳೆರಡೂ ಗ್ರಂಥಕರ್ತೃತ್ವವು ಯೆರೆಮೀಯನಿಗೆ ಸೇರಿದ್ದವೆನ್ನುತ್ತವೆ. ಪುಸ್ತಕದ ಗ್ರಂಥಕರ್ತನು ಯೆರೂಸಲೇಮಿನ ನಾಶದ ಫಲಿತಾಂಶಗಳ ಪ್ರತ್ಯಕ್ಷದರ್ಶಿಯಾಗಿದ್ದಾನೆ, ಅವನು ಆಕ್ರಮಣವನ್ನು ಕಣ್ಣಾರೆ ಕಂಡವನು ಎಂದು ತೋರುತ್ತದೆ (ಪ್ರಲಾಪ. 1:13-15). ಯೆರೆಮೀಯನು ಎರಡೂ ಘಟನೆಗಳಿಗೂ ಉಪಸ್ಥಿತನಿದ್ದನು. ಯೆಹೂದವು ದೇವರಿಗೆ ವಿರುದ್ಧವಾಗಿ ತಿರುಗಿಬಿದ್ದು, ಆತನೊಂದಿಗಿನ ತನ್ನ ಒಡಂಬಡಿಕೆಯನ್ನು ಮುರಿದುಹಾಕಿತು. ದೇವರು ತನ್ನ ಜನರನ್ನು ಶಿಸ್ತುಗೊಳಿಸಲು ಬಾಬೆಲಿನವರನ್ನು ತನ್ನ ಕೈಗೊಂಬೆಯಾಗಿ ಉಪಯೋಗಿಸುವುದರ ಮೂಲಕ ಪ್ರತಿಕ್ರಿಯಿಸಿದನು. ಪುಸ್ತಕದಲ್ಲಿ ವಿವರಿಸಲ್ಪಟ್ಟಿರುವ ಕಡು ಸಂಕಷ್ಟದ ಹೊರತಾಗಿಯೂ, ಮೂರನೆಯ ಅಧ್ಯಾಯವು ನಿರೀಕ್ಷೆಯ ವಾಗ್ದಾನದೊಂದಿಗೆ ಅದನ್ನು ವಿಚ್ಛಿನ್ನಗೊಳಿಸುತ್ತದೆ. ಯೆರೆಮೀಯನು ದೇವರ ಒಳ್ಳೆಯತನವನ್ನು ನೆನಪಿಸಿಕೊಳ್ಳುತ್ತಾನೆ. ದೇವರ ನಂಬಿಗಸ್ತಿಕೆಯ ಸತ್ಯದ ಮೂಲಕ, ಕರ್ತನ ಕರುಣೆಯನ್ನು ಮತ್ತು ಶಾಶ್ವತವಾದ ಪ್ರೀತಿಯನ್ನು ತನ್ನ ಓದುಗಾರರಿಗೆ ಹೇಳುವುದರ ಮೂಲಕ ಅವನು ಸಾಂತ್ವನವನ್ನು ನೀಡುತ್ತಾನೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 586-584 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಬಾಬೆಲಿನವರು ಪಟ್ಟಣವನ್ನು ಸೆರೆಹಿಡಿದು ಧ್ವಂಸಗೊಳಿಸಿದ ನಂತರ ಪ್ರವಾದಿಯಾದ ಯೆರೆಮೀಯನು ಯೆರೂಸಲೇಮಿನ ಶೋಕದ ಬಗ್ಗೆ ಪ್ರತ್ಯಕ್ಷ ಸಾಕ್ಷ್ಯವನ್ನು ಕೊಟ್ಟನು.
ಸ್ವೀಕೃತದಾರರು
ಸೆರೆವಾಸದಲ್ಲಿ ಬದುಕುಳಿದ ಮತ್ತು ಇಸ್ರಾಯೇಲಿಗೆ ಹಿಂದಿರುಗಿದ ಇಬ್ರಿಯರು ಮತ್ತು ಸತ್ಯವೇದದ ಓದುಗಾರರೆಲ್ಲರು.
ಉದ್ದೇಶ
ರಾಷ್ಟ್ರೀಯ ಮತ್ತು ವೈಯಕ್ತಿಕ ಪಾಪಗಳೆರಡಕ್ಕೂ ಪರಿಣಾಮಗಳಿವೆ, ದೇವರು ತನ್ನ ಹಿಂಬಾಲಕರನ್ನು ತನ್ನ ಬಳಿಗೆ ಹಿಂದಿರುಗಿ ಕರೆತರಲು ಜನರನ್ನು ಮತ್ತು ಸಂದರ್ಭಗಳನ್ನು ಸಾಧನಗಳಾಗಿ ಉಪಯೋಗಿಸುತ್ತಾನೆ, ನಿರೀಕ್ಷೆಯು ದೇವರಲ್ಲಿ ಮಾತ್ರವೇ ನೆಲೆಗೊಂಡಿದೆ, ದೇವರು ಸೆರೆವಾಸದಲ್ಲಿ ಯೆಹೂದ್ಯರ ಅವಶೇಷವನ್ನು ಕಾಪಾಡಿ ಉಳಿಸಿದಂತೆ, ಆತನು ತನ್ನ ಮಗನಾದ ಯೇಸುವಿನಲ್ಲಿ ಒಬ್ಬ ರಕ್ಷಕನನ್ನು ಒದಗಿಸಿಕೊಟ್ಟಿದ್ದಾನೆ. ಪಾಪವು ನಿತ್ಯವಾದ ಮರಣವನ್ನು ಉಂಟುಮಾಡುತ್ತದೆ, ಆದರೆ ದೇವರು ತನ್ನ ರಕ್ಷಣೆಯ ಯೋಜನೆ ಮೂಲಕ ನಿತ್ಯಜೀವವನ್ನು ನೀಡುತ್ತಾನೆ. ಪ್ರಲಾಪಗಳ ಪುಸ್ತಕವು ಪಾಪ ಮತ್ತು ಬಂಡಾಯವು ದೇವರ ಕ್ರೋಧವು ಸುರಿಯಲ್ಪಡಲು ಕಾರಣವಾಗುತ್ತದೆ ಎಂದು ಸ್ಪಷ್ಟಪಡಿಸುತ್ತದೆ (1:8-9; 4:13; 5:16).
ಮುಖ್ಯಾಂಶ
ಪ್ರಲಾಪ
ಪರಿವಿಡಿ
1. ಯೆರೆಮೀಯನು ಯೆರೂಸಲೇಮಿಗಾಗಿ ದುಃಖಿಸುವುದು — 1:1-22
2. ಪಾಪವು ದೇವರ ಕ್ರೋಧವನ್ನು ಉಂಟುಮಾಡುತ್ತದೆ — 2:1-22
3. ದೇವರು ತನ್ನ ಜನರನ್ನು ಎಂದಿಗೂ ಬಿಟ್ಟುಬಿಡುವುದಿಲ್ಲ — 3:1-66
4. ಯೆರೂಸಲೇಮಿನ ಮಹಿಮೆಯು ಕಳೆದುಹೋದದ್ದು — 4:1-22
5. ಯೆರೆಮೀಯನು ಜನರಿಗಾಗಿ ಮಧ್ಯಸ್ಥಿಕೆ ವಹಿಸುವುದು — 5:1-22
1
ಯೆರೂಸಲೇಮಿನವರ ದುಃಖ
1 ಅಯ್ಯೋ, ಜನಭರಿತವಾಗಿದ್ದ ನಗರಿಯು ಒಂಟಿಯಾಗಿ ಕುಳಿತುಬಿಟ್ಟಳಲ್ಲಾ!
ಜನಾಂಗಗಳಲ್ಲಿ ರತ್ನವಾಗಿದ್ದವಳು ವಿಧವೆಯಾದಳು,
ಸಂಸ್ಥಾನಗಳಲ್ಲಿ ಶಿರೋಮಣಿಯಾಗಿದ್ದವಳು ಗುಲಾಮಳಾದಳು.
2 ರಾತ್ರಿಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಾ ಗೋಳಾಡುವುದರಿಂದ ಕಣ್ಣೀರು ಕೆನ್ನೆಗಳ ಮೇಲೆ ನಿಂತೇ ಇದೆ;
ಆಕೆಯ ಬಹುಮಂದಿ ಪ್ರಿಯರಲ್ಲಿ ಯಾರೂ ಸಂತೈಸರು; ಆಕೆಯ ಮಿತ್ರರೆಲ್ಲಾ ದ್ರೋಹಮಾಡಿ ಶತ್ರುಗಳಾಗಿದ್ದಾರೆ.
3 ಯೆಹೂದವೆಂಬಾಕೆಯು ಘೋರವಾದ ಸೇವೆ ಮತ್ತು ಶ್ರಮೆಗಳಿಂದ ತಪ್ಪಿಸಿಕೊಳ್ಳಬೇಕೆಂದು ವಲಸೆಹೋಗಿದ್ದಾಳೆ;
ಮ್ಲೇಚ್ಛರ ಮಧ್ಯದಲ್ಲಿ ನೆಮ್ಮದಿಯಿಲ್ಲದೆ ವಾಸಮಾಡುತ್ತಿದ್ದಾಳೆ;
ಆಕೆಯು ಇಕ್ಕಟ್ಟಿಗೆ ಸಿಕ್ಕಿಕೊಂಡಿರುವಾಗಲೇ ಆಕೆಯ ಹಿಂಸಕರೆಲ್ಲಾ ಆಕೆಯನ್ನು ಹಿಂದಟ್ಟಿ ಹಿಡಿದರು.
4 ಯಾರೂ ಮಹೋತ್ಸವಗಳಿಗೆ ಬಾರದೆ ಇರುವುದರಿಂದ ಚೀಯೋನಿಗೆ ಹೋಗುವ ದಾರಿಗಳು ಬಿಕೋ ಎನ್ನುತ್ತಿವೆ;
ಅದರ ಬಾಗಿಲುಗಳೆಲ್ಲಾ ಹಾಳು ಬಿದ್ದಿವೆ, ಅಲ್ಲಿನ ಯಾಜಕರು ನರಳಾಡುತ್ತಾರೆ;
ಅಲ್ಲಿನ ಕನ್ಯೆಯರು ವ್ಯಥೆಪಡುತ್ತಾರೆ, ನಗರಿಗೆ ನಗರಿಯೇ ಶೋಕದಿಂದ ತುಂಬಿದೆ.
5 ಅದರ ಲೆಕ್ಕವಿಲ್ಲದ ದ್ರೋಹಗಳಿಗಾಗಿ ಯೆಹೋವನು ಅದನ್ನು ವ್ಯಥೆಗೊಳಿಸಿದ್ದಾನೆ; ಅದರ ವಿರೋಧಿಗಳು ಅದಕ್ಕೆ ಅಧಿಪತಿಗಳಾಗಿದ್ದಾರೆ,
ಅದರ ಶತ್ರುಗಳು ನೆಮ್ಮದಿಯಲ್ಲಿದ್ದಾರೆ; ಅದರ ಎಳೆಕೂಸುಗಳು ವಿರೋಧಿಗಳ ವಶದಲ್ಲಿ ಸೆರೆಹೋಗಿವೆ.
6 ಚೀಯೋನ್ ನಗರಿಯ ವೈಭವವೆಲ್ಲಾ ಕಳೆದುಹೋಗಿದೆ; ಅಲ್ಲಿನ ಪ್ರಧಾನರು ಮೇವಿಲ್ಲದ ಜಿಂಕೆಗಳಂತೆ ಬಲಗುಂದಿ ಹಿಡಿಯಲು ಬೆನ್ನತ್ತಿದವರಿಗೆ ಬೆನ್ನುಕೊಟ್ಟು ಓಡಿಹೋಗಿದ್ದಾರೆ.
7 ಯೆರೂಸಲೇಮ್ ಪುರಿಯು ದಿಕ್ಕಾಪಾಲಾಗಿ ಅಲೆದು ಕಷ್ಟಪಡುವಾಗ ಪುರಾತನಕಾಲದಿಂದ ತನಗಿದ್ದ ವೈಭವವನ್ನು ಜ್ಞಾಪಿಸಿಕೊಳ್ಳುತ್ತಾಳೆ.
ಆಕೆಗೆ ಯಾರ ಸಹಾಯವೂ ಇಲ್ಲದೆ ಆಕೆಯ ಜನರು ವಿರೋಧಿಯ ಕೈಗೆ ಸಿಕ್ಕಿದಾಗ ಹಾಳುಬಿದ್ದಿರುವ ಆಕೆಯನ್ನು ವೈರಿಗಳು ನೋಡಿ ಹಾಸ್ಯಮಾಡಿದರು.
8 ಯೆರೂಸಲೇಮು ಪಾಪಮಾಡಿ ಅಶುದ್ಧಳಾಗಿದ್ದಾಳೆ; ಮೊದಲು ಆಕೆಯನ್ನು ಸನ್ಮಾನಿಸುತ್ತಿದ್ದವರು ಈಗ ಆಕೆಯ ಮಾನಭಂಗವನ್ನು ಕಂಡು ಹೀನೈಸುತ್ತಾರೆ; ಆಕೆಯು ಮುಖಮುಚ್ಚಿ ದುಃಖಿಸುತ್ತಾಳೆ.
9 ಆಕೆಯ ನೆರಿಗೆಯು ಹೊಲಸಾಗಿತ್ತು, ಮುಂದಿನ ಗತಿಯೇನೆಂದು ಮನಸ್ಸಿಗೆ ತರಲಿಲ್ಲ; ಆದಕಾರಣ ವಿಪರೀತ ಹೀನಸ್ಥಿತಿಯಲ್ಲಿ ಬಿದ್ದು ಬಿಟ್ಟಳು; ಸಂತೈಸುವವರೇ ಇಲ್ಲ.
“ಯೆಹೋವನೇ, ನನ್ನ ಕಷ್ಟವನ್ನು ಲಕ್ಷಿಸು; ನನ್ನ ಶತ್ರು ಹೆಚ್ಚಳಪಡುತ್ತಾನಲ್ಲಾ” ಎಂದು ಮೊರೆಯಿಡುತ್ತಾಳೆ.
10 ವಿರೋಧಿಯು ಕೈಚಾಚಿ ಅವಳ ಭೋಗ್ಯವಸ್ತುಗಳನ್ನೆಲ್ಲಾ ಬಾಚಿಬಿಟ್ಟನು; “ಮ್ಲೇಚ್ಛರು ನಿನ್ನ ಸಭೆಗೆ ಸೇರಬಾರದು” ಎಂದು ನೀನು ಆಜ್ಞಾಪಿಸಿದರೂ
ಅಂಥವರೇ ತನ್ನಲ್ಲಿನ ಪವಿತ್ರಾಲಯದೊಳಗೆ ಸೇರುವುದನ್ನು ಆಕೆಯು ಕಾಣಬೇಕಾಯಿತು.
11 ಆಕೆಯ ಜನರೆಲ್ಲಾ ನರಳುತ್ತಾರೆ, ಅವರು ಅನ್ನವನ್ನು ಹುಡುಕಿಕೊಳ್ಳುವ ಗತಿ ಬಂತು, ಪ್ರಾಣಾಧಾರವಾದ ಆಹಾರಕ್ಕಾಗಿ ತಮ್ಮ ಅಮೂಲ್ಯ ವಸ್ತುಗಳನ್ನೂ ಕೊಟ್ಟುಬಿಟ್ಟಿದ್ದಾರೆ,
“ಯೆಹೋವನೇ, ನೋಡು, ಕಟಾಕ್ಷಿಸು, ನಾನು ತುಚ್ಛಳಾದೆನಲ್ಲಾ” ಎಂದು ಪ್ರಲಾಪಿಸುತ್ತಾಳೆ.
12 ಹಾದುಹೋಗುವವರೇ, ನಿಮ್ಮಲ್ಲಿ ಯಾರಿಗೂ ನನ್ನ ಚಿಂತೆ ಇಲ್ಲವೋ? ಯೆಹೋವನು ಅತಿ ರೋಷಗೊಂಡು
ನನ್ನನ್ನು ಬಾಧಿಸಿ ನನಗೆ ಉಂಟುಮಾಡಿದ ವ್ಯಥೆಯನ್ನು ನೀವು ನೋಡಿ
ಇಂಥಾ ವ್ಯಥೆಯು ಇನ್ನೆಲ್ಲಾದರೂ ಉಂಟೋ ಯೋಚಿಸಿರಿ.
13 ಆತನು ಮೇಲಣ ಲೋಕದಿಂದ ಬೆಂಕಿಯನ್ನು ಕಳುಹಿಸಿದ್ದಾನೆ, ಅದು ನನ್ನ ಎಲುಬುಗಳನೆಲ್ಲಾ ವ್ಯಾಪಿಸಿದೆ;
ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾನೆ, ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾನೆ,
ನಾನು ಹಾಳುಬಿದ್ದು ಸದಾ ಬಳಲುವಂತೆ ಮಾಡಿದ್ದಾನೆ.
14 ಆತನ ಕೈ, ನನ್ನ ದ್ರೋಹಗಳನ್ನು ನನ್ನ ಮೇಲೆ ನೊಗವು ಇರುವಂತೆ ನನ್ನನ್ನು ಬಿಗಿದಿದೆ. ಆ ದ್ರೋಹಗಳು ಹುರಿಗೊಂಡು ನನ್ನ ಕುತ್ತಿಗೆಯನ್ನು ಸುತ್ತಿಕೊಂಡಿವೆ;
ನನ್ನ ಬಲವನ್ನು ಕುಂದಿಸಿದ್ದಾನೆ; ನಾನು ಎದುರಿಸಲಾರದವರ ಕೈಗೆ ಕರ್ತನು ನನ್ನನ್ನು ಸಿಕ್ಕಿಸಿದ್ದಾನೆ.
15 ಕರ್ತನು ನನ್ನ ಶೂರರನ್ನೆಲ್ಲಾ ನನ್ನ ಕಣ್ಣೆದುರಿಗೆ ಹೊರಳಾಡಿಸಿದ್ದಾನೆ; ನನ್ನ ಯುವಕರನ್ನು ಸದೆಬಡಿದಿದ್ದಾನೆ.
ನನ್ನ ಕೇಡಿಗಾಗಿಯೇ ಮಹೋತ್ಸವವನ್ನು ಏರ್ಪಡಿಸಿದ್ದಾನೆ;
ಕರ್ತನು ಯೆಹೂದವೆಂಬ ಕನ್ಯೆಯನ್ನು ತೊಟ್ಟಿಯಲ್ಲಿನ ದ್ರಾಕ್ಷಿಯ ಹಾಗೆ ತುಳಿದಿದ್ದಾನೆ.
16 ಈ ವಿಪತ್ತುಗಳಿಂದ ಗೋಳಾಡುತ್ತಿರುವೆನು, ನನ್ನನ್ನು ಸಂತೈಸಿ ದಣಿವಾರಿಸತಕ್ಕವನು ದೂರವಾಗಿರುವುದರಿಂದ
ನನ್ನ ಕಣ್ಣೀರು ಧಾರೆಧಾರೆಯಾಗಿ ಸುರಿಯುವುದು. ಶತ್ರುವು ಗೆದ್ದು ನನ್ನ ಮಕ್ಕಳು ಹಾಳಾದರು.
17 ಚೀಯೋನ್ ನಗರಿಯು ಕೈಚಾಚಿ ಅಂಗಲಾಚಿದರೂ ಯಾರೂ ಸಂತೈಸರು; ಯಾಕೋಬಿನ ನೆರೆಹೊರೆಯವರು
ಅದಕ್ಕೆ ವಿರೋಧಿಗಳಾಗಿರಲಿ ಎಂದು ಯೆಹೋವನು ತೀರ್ಮಾನಿಸಿದ್ದಾನೆ; ಯೆರೂಸಲೇಮು ಅವರ ನಡುವೆ ಹೊಲೆಯಾಗಿ ಬಿದ್ದಿದೆ.
18 ಯೆಹೋವನು ನೀತಿಸ್ವರೂಪನು, ನಾನಾದರೋ ಆತನ ಆಜ್ಞೆಗಳನ್ನು ಮೀರಿದ ದ್ರೋಹಿ;
ಜನಾಂಗಗಳೇ, ನೀವೆಲ್ಲರೂ ಕಿವಿಗೊಡಿರಿ, ನನ್ನ ವ್ಯಥೆಯನ್ನು ನೋಡಿರಿ; ನನ್ನ ಕನ್ಯೆಯರು ಮತ್ತು ಯುವಕರು ಸೆರೆಹೋಗಿದ್ದಾರಲ್ಲಾ!
19 ನಾನು ಕೂಗಿಕೊಂಡರೂ ನನ್ನ ನಲ್ಲರಿಂದ ನನಗೆ ಮೋಸವಾಯಿತು,
ನನ್ನ ಯಾಜಕರೂ ಮತ್ತು ಹಿರಿಯರೂ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದು ಆಹಾರವನ್ನು ಹುಡುಕುವುದರಲ್ಲಿಯೇ ಪಟ್ಟಣದೊಳಗೆ ಪ್ರಾಣಬಿಟ್ಟರು.
20 ಯೆಹೋವನೇ, ಕಟಾಕ್ಷಿಸು; ನಾನು ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದೇನೆ, ನನ್ನ ಕರುಳು ಕುದಿಯುತ್ತಿದೆ.
ನಾನು ಕೇವಲ ದ್ರೋಹಮಾಡಿದ್ದರಿಂದ ನನ್ನ ಹೃದಯವು ನನ್ನೊಳಗೆ ಕುಂದಿಹೋಗಿದೆ; ಮನೆಯ ಹೊರಗೆ ಸಂಹಾರ, ಒಳಗೆ ಪ್ರಾಣಸಂಕಟ.
21 ಯಾರೂ ನನ್ನನ್ನು ಸಂತೈಸರು; ನನ್ನ ನರಳಾಟದ ಸುದ್ದಿಯು ನನ್ನ ವೈರಿಗಳ ಕಿವಿಗೆ ಬಿದ್ದಿದೆ;
ನನ್ನ ಶತ್ರುಗಳೆಲ್ಲಾ ನನಗಾದ ಕೇಡಿನ ಸಮಾಚಾರವನ್ನು ಕೇಳಿ ಅದನ್ನು ಮಾಡಿದವನು ನೀನೇ ಎಂದು ಉಲ್ಲಾಸಪಡುತ್ತಾರೆ.
ನೀನು ಮುಂತಿಳಿಸಿದ ದಿನವನ್ನು ಬರಮಾಡುವಾಗ ನನಗಾದ ಗತಿಯು ಅವರಿಗೂ ಆಗಲಿ!
22 ಅವರು ಮಾಡಿದ ಕೆಡುಕೆಲ್ಲಾ ನಿನ್ನ ಚಿತ್ತಕ್ಕೆ ಮುಟ್ಟಲಿ;
ನೀನು ನನ್ನ ಎಲ್ಲಾ ದ್ರೋಹಗಳಿಗೆ ಪ್ರತಿಯಾಗಿ ನನಗೆ ಮಾಡಿದಂತೆ ಅವರಿಗೂ ಮಾಡು;
ನನ್ನ ನರಳಾಟವು ಬಹಳವಾಗಿದೆ, ನನ್ನ ಎದೆಯು ಕುಂದಿಹೋಗಿದೆ.