4
ದೇವಾಲಯ ಕಟ್ಟುವುದಕ್ಕೆ ಸಮಾರ್ಯರು ಅಡ್ಡಿಮಾಡಿದ್ದು
1 ಸೆರೆಯಿಂದ ಹಿಂತಿರುಗಿ ಬಂದವರು ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಮಂದಿರವನ್ನು ಕಟ್ಟುತ್ತಿದ್ದಾರೆ ಎಂಬ ಸುದ್ದಿ ಯೆಹೂದ್ಯರ ಮತ್ತು ಬೆನ್ಯಾಮೀನ್ಯರ ವಿರೋಧಿಗಳಿಗೆ ತಿಳಿದುಬಂತು. 2 ಆಗ ಅವರು ಜೆರುಬ್ಬಾಬೆಲನ ಬಳಿಗೂ ಗೋತ್ರಪ್ರಧಾನರ ಬಳಿಗೂ ಬಂದು ಅವರಿಗೆ, “ನಿಮ್ಮೊಡನೆ ದೇವಾಲಯ ಕಟ್ಟುವುದಕ್ಕೆ ನಮಗೂ ಅಪ್ಪಣೆಯಾಗಲಿ, ಯಾಕೆಂದರೆ ನಿಮ್ಮಂತೆ ನಾವು ನಿಮ್ಮ ದೇವರ ಭಕ್ತರಾಗಿದ್ದೇವೆ. ನಮ್ಮನ್ನು ಇಲ್ಲಿ ತಂದಿರಿಸಿದ ಅಶ್ಶೂರದ ಅರಸನಾದ ಏಸರ್ಹದ್ದೋನನ ಕಾಲದಿಂದ ನಾವು ಆತನಿಗೇ ಯಜ್ಞಸಮರ್ಪಣೆಯನ್ನು ಮಾಡುತ್ತಾ ಬಂದಿದ್ದೇವೆ” ಎಂದು ಹೇಳಿದರು. 3 ಆಗ ಜೆರುಬ್ಬಾಬೆಲ್, ಯೇಷೂವ ಮತ್ತು ಬೇರೆ ಇಸ್ರಾಯೇಲ್ ಗೋತ್ರಪ್ರಧಾನರೂ ಅವರಿಗೆ, “ನೀವು ನಮ್ಮ ದೇವರ ಆಲಯ ಕಟ್ಟುವುದರಲ್ಲಿ ನಮ್ಮೊಡನೆ ಸೇರಲೇ ಕೂಡದು. ಪರ್ಷಿಯ ದೇಶದ ರಾಜನಾದ ಕೋರೆಷನಿಂದ ನಮಗಾದ ಅಪ್ಪಣೆಯ ಮೇರೆಗೆ ನಾವೇ ಇಸ್ರಾಯೇಲ್ ದೇವರಾದ ಯೆಹೋವನ ಆಲಯವನ್ನು ಕಟ್ಟುತ್ತೇವೆ” ಎಂದು ಉತ್ತರ ಕೊಟ್ಟರು. 4 ಆಗ ಆ ದೇಶನಿವಾಸಿಗಳು ಯೆಹೂದ್ಯರನ್ನು ಧೈರ್ಯಗುಂದಿಸಿ ದೇವಾಲಯ ಕಟ್ಟದ ಹಾಗೆ ಬೆದರಿಸಿದರು. ಇದರೊಂದಿಗೆ ಅವರ ಉದ್ದೇಶವನ್ನು ಕೆಡಿಸುವುದಕ್ಕೋಸ್ಕರ ಹಣಕೊಟ್ಟು ವಕೀಲರನ್ನು ನೇಮಿಸಿಕೊಂಡರು. 5 ಪರ್ಷಿಯ ರಾಜನಾದ ಕೋರೆಷನ ಕಾಲದಿಂದ ಪರ್ಷಿಯ ರಾಜನಾದ ದಾರ್ಯಾವೆಷನ ಆಳ್ವಿಕೆಯವರೆಗೂ ಇದು ಮುಂದುವರಿಯಿತು.
ಯೆರೂಸಲೇಮ್ ಪಟ್ಟಣದ ಪುನರ್ನಿರ್ಮಾಣಕ್ಕೆ ಅಡ್ದಿ
6 ಅಹಷ್ವೇರೋಷನ ಆಳ್ವಿಕೆಯ ಪ್ರಾರಂಭದಲ್ಲಿ ಅವರು ಯೆಹೂದದಲ್ಲಿಯೂ ಮತ್ತು ಯೆರೂಸಲೇಮಿನಲ್ಲಿಯೂ ವಾಸ ಮಾಡುತ್ತಿದ್ದವರ ವಿರುದ್ಧವಾಗಿ ಆಪಾದನೆಯ ಪತ್ರವನ್ನು ಬರೆದರು. 7 ಮತ್ತು ಅರ್ತಷಸ್ತನ ಕಾಲದಲ್ಲಿ ಬಿಷ್ಲಾಮ್, ಮಿತ್ರದಾತ, ಟಾಬೆಯೇಲ್ ಈ ಮೊದಲಾದವರು ಪರ್ಷಿಯ ರಾಜನಾದ ಅರ್ತಷಸ್ತನಿಗೆ ಬರೆದರು. ಆ ಪತ್ರವು ಅರಾಮ್ಯ ಲಿಪಿಯಲ್ಲಿಯೂ ಮತ್ತು ಅರಾಮ್ಯ ಭಾಷೆಯಲ್ಲಿಯೂ ಇತ್ತು. 8 * 4:8 ಎಜ್ರ 4:8-6:18 ಅರಾಮಿಕ್ ಭಾಷೆಯಲ್ಲಿ ಬರೆಯಲ್ಪಟ್ಟಿದೆ.ದೇಶಾಧಿಪತಿಯಾದ ರೆಹೂಮ್, ಲೇಖಕನಾದ ಶಿಂಷೈ ಇವರು ಯೆರೂಸಲೇಮಿಗೆ ವಿರುದ್ಧವಾಗಿ ಮುಂದಿನ ಕಾಗದವನ್ನು ಬರೆದು ಅರ್ತಷಸ್ತನಿಗೆ ಕಳುಹಿಸಿದರು.
9 ಅದರಲ್ಲಿ, ದೇಶಾಧಿಪತಿಯಾದ ರೆಹೂಮ್, ಲೇಖಕನಾದ ಶಿಂಷೈ ಇವರೂ ಇವರ ಜೊತೆಗಾರರಾದ ದಿನಾಯರು, ಅಪರ್ಸತ್ಕಾಯರು, ಟರ್ಪಲಾಯರು, ಅಪಾರ್ಸಾಯರು, ಯೆರೆಕ್ಯರು, ಬಾಬಿಲೋನಿನವರು, ಶೂಷನಿನವರು, ದೆಹಾಯರು ಮತ್ತು ಏಲಾಮ್ಯರು. 10 ಇವರೂ ಮಹಾಶ್ರೀಮತ್ ಆಸೆನಪ್ಪರನು ಕರತಂದು ಸಮಾರ್ಯ ಪಟ್ಟಣದಲ್ಲಿ ಮತ್ತು ಹೊಳೆಯ ಈಚೆಗಿರುವ ಬೇರೆ ಊರುಗಳಲ್ಲಿ ಇರಿಸಿದ ಇತರ ಜನರು ಇತ್ಯಾದಿ ಶಿರೋಲೇಖ. 11 ಅವರು ಅರಸನಿಗೆ ಕಳುಹಿಸಿದ ಪತ್ರದ ಸಾರಾಂಶ ಹೀಗಿತ್ತು, “ಅರ್ತಷಸ್ತ ರಾಜರಿಗೆ, ನಿಮ್ಮ ಸೇವಕರಾದ ಹೊಳೆಯ ಈಚೆಯವರು. 12 ನಿನ್ನ ಸನ್ನಿಧಿಯಿಂದ ನಮ್ಮ ಬಳಿಗೆ ಬಂದ ಯೆಹೂದ್ಯರು ಯೆರೂಸಲೇಮನ್ನು ಸೇರಿ ರಾಜಕಂಟಕವಾದ ಆ ಕೆಟ್ಟ ಪಟ್ಟಣವನ್ನೂ, ಅದರ ಪೌಳಿಗೋಡೆಯನ್ನೂ ಪುನಃ ಕಟ್ಟುವುದಕ್ಕೆ ಪ್ರಾರಂಭಿಸಿ ಪೌಳಿಗೋಡೆಯ ಅಸ್ತಿವಾರವನ್ನು ಜೀರ್ಣೋದ್ಧಾರಮಾಡಿದ್ದಾರೆ ಎಂಬುದಾಗಿ ನಾವು ತಮಗೆ ಅರಿಕೆಮಾಡಿಕೊಳ್ಳುತ್ತೇವೆ. 13 ಆ ಪಟ್ಟಣವನ್ನೂ ಅದರ ಗೋಡೆಗಳನ್ನೂ ಕಟ್ಟುವುದು ಮುಕ್ತಾಯಗೊಂಡರೆ ಅವರು ಕಪ್ಪ, ತೆರಿಗೆ ಮತ್ತು ಸುಂಕಗಳನ್ನು ಪಾವತಿಸಲಿಕ್ಕಿಲ್ಲ ಮತ್ತು ಕಡೆಯಲ್ಲಿ ಇದರಿಂದ ಅರಸರಿಗೆ ನಷ್ಟವುಂಟಾಗುವುದೆಂದು ತಮಗೆ ತಿಳಿದಿರಲಿ. 14 ನಾವಂತು ಅರಮನೆಯ ಉಪ್ಪನ್ನು ತಿನ್ನುವವರಾದುದರಿಂದ ಅರಸರಿಗೆ ಅಪಮಾನವುಂಟಾಗುವುದನ್ನು ನೋಡಿ ಸುಮ್ಮನಿರುವುದು ಸರಿಯಲ್ಲವೆಂದು ತಿಳಿದು ಅರಸರಿಗೆ ಈ ಪತ್ರದ ಮೂಲಕವಾಗಿ ವರ್ತಮಾನ ಕಳುಹಿಸಿದ್ದೇವೆ. 15 ಈ ವಿಷಯವಾಗಿ ತಾವು ತಮ್ಮ ತಂದೆತಾತಂದಿರ ಚರಿತ್ರಗ್ರಂಥಗಳನ್ನು ಪರಿಶೋಧಿಸಿ ತಿಳಿದುಕೊಳ್ಳುವುದು ಸೂಕ್ತ ಎಂಬುದು ನಮ್ಮ ಅಭಿಪ್ರಾಯ. ಆ ಪಟ್ಟಣವು ರಾಜಕಂಟಕವಾದ ಪಟ್ಟಣವು. ಅರಸರಿಗೂ ಸಂಸ್ಥಾನಗಳಿಗೂ ತೊಂದರೆ ಹುಟ್ಟಿಸುವಂಥದು, ಪೂರ್ವಕಾಲದಿಂದಲೇ ದಂಗೆಯೆಬ್ಬಿಸುವಂಥದು ಎಂಬುದೂ ಆ ಕಾರಣದಿಂದಲೇ ಈ ಪಟ್ಟಣವು ನೆಲಸಮವಾಯಿತು ಎಂದು ಆ ಚರಿತ್ರಾ ಗ್ರಂಥದಲ್ಲಿ ಕಂಡುಬರುತ್ತದೆ. 16 ಆ ಪಟ್ಟಣವನ್ನೂ ಅದರ ಗೋಡೆಗಳನ್ನೂ ಪುನಃ ಕಟ್ಟುವುದಾದರೆ ತಮಗೆ ಹೊಳೆಯ ಈಚೆಯಲ್ಲಿ ಒಂದು ಅಂಗುಲವೂ ಉಳಿಯದು ಎಂಬುದಾಗಿ ಅರಸರಿಗೆ ಅರಿಕೆಮಾಡಿಕೊಳ್ಳುತ್ತೇವೆ ಎಂಬುದೇ.”
17 ಅರಸನು ಅವರಿಗೆ ಕೊಟ್ಟ ಉತ್ತರವು, “ದೇಶಾಧಿಪತಿಯಾದ ರೆಹೂಮ್, ಲೇಖಕನಾದ ಶಿಂಷೈ ಇವರಿಗೂ ಸಮಾರ್ಯದಲ್ಲಿರುವ ಅವರ ಜೊತೆಗಾರರಿಗೂ ಹೊಳೆಯ ಆಚೆಯಲ್ಲಿರುವ ಇತರರಿಗೂ, ನಮ್ಮ ಕುಶಲಕ್ಷೇಮಗಳ ಅಭಿಲಾಷೆ ವ್ಯಕ್ತಪಡಿಸುತ್ತೇವೆ. 18 ನೀವು ಕಳುಹಿಸಿದ ಪತ್ರವು ನನ್ನ ಮುಂದೆ ಓದಲಾಯಿತು. ಅದರ ಸಂಪೂರ್ಣ ವಿಷಯ ಮನದಟ್ಟಾಯಿತು. 19 ನನ್ನ ಆಜ್ಞಾನುಸಾರ ವಿಚಾರಣೆ ಮಾಡಿ ಪರಿಶೀಲಿಸಿದಾಗ ಆ ಪಟ್ಟಣದವರು ಪೂರ್ವಕಾಲದಿಂದಲೇ ಅರಸರಿಗೆ ವಿರುದ್ಧವಾಗಿ ತಿರುಗಿಬೀಳುತ್ತಾ, ದ್ರೋಹಮಾಡುತ್ತಾ, ದಂಗೆಯೆಬ್ಬಿಸುತ್ತಾ ಇದ್ದವರು ಎಂದು ತಿಳಿಯಿತು. 20 ಅವರು ಯೆರೂಸಲೇಮಿನಲ್ಲಿ ಬಲಿಷ್ಠರಾಗಿ ರಾಜ್ಯ ಆಳುತ್ತಾ, ಹೊಳೆಯಾಚೆಯ ಎಲ್ಲಾ ಪ್ರದೇಶಗಳಲ್ಲಿ ಅಧಿಕಾರನಡಿಸುತ್ತಾ, ಕಪ್ಪ, ತೆರಿಗೆ ಸುಂಕಗಳನ್ನು ತೆಗೆದುಕೊಳ್ಳುತ್ತಾ ಇದ್ದರೆಂದು ಕಂಡುಬಂದಿತು. 21 ಆದುದರಿಂದ ಆ ಮನುಷ್ಯರನ್ನು ತಡೆಯಬೇಕೆಂತಲೂ, ನನ್ನ ಅಪ್ಪಣೆಯಾಗುವ ವರೆಗೆ ಆ ಪಟ್ಟಣವನ್ನು ಕಟ್ಟಲು ಆವಕಾಶ ಕೊಡಬಾರದೆಂತಲೂ ಪ್ರಕಟಿಸಿರಿ. 22 ರಾಜರಿಗೆ ಹಾನಿಯುಂಟಾಗದ ಹಾಗೆ ಜಾಗರೂಕತೆಯಿಂದಿರಿ, ಉದಾಸೀನತೆಯಿಂದ ಲಕ್ಷಿಸದೆ ಇರಬೇಡಿ” ಎಂದು ತಿಳಿಸಿದನು.
23 ಅರಸನಾದ ಅರ್ತಷಸ್ತನ ಈ ಪತ್ರವನ್ನು ರೆಹೂಮ್, ಲೇಖಕನಾದ ಶಿಂಷೈ ಇವರ ಮುಂದೆಯೂ ಇವರ ಜೊತೆಗಾರರ ಮುಂದೆಯೂ ಓದಿದ ಕೂಡಲೆ ಅವರು ಶೀಘ್ರವಾಗಿ ಯೆರೂಸಲೇಮಿಗೆ ಹೋಗಿ ಬಲವಂತದಿಂದಲೂ ಅಧಿಕಾರದಿಂದಲೂ ಯೆಹೂದ್ಯರನ್ನು ತಡೆದರು.
24 ಅಂದಿನಿಂದ ಪರ್ಷಿಯ ದೇಶದ ರಾಜನಾದ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದವರೆಗೂ ಯೆರೂಸಲೇಮಿನ ದೇವಾಲಯವನ್ನು ಕಟ್ಟುವ ಕೆಲಸವು ನಿಂತುಹೋಯಿತು.