11
1 ಮೇದ್ಯನಾದ ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ನಾನೇ ಮೀಕಾಯೇಲನಿಗೆ ಬೆಂಬಲಕೊಟ್ಟು ಆಶ್ರಯನಾಗಿ ನಿಂತೆನು.
ದಕ್ಷಿಣ ಮತ್ತು ಉತ್ತರ ದಿಕ್ಕಿನ ಅರಸರು
2 ನಾನು ಈಗ ಸತ್ಯಾಂಶವನ್ನು ನಿನಗೆ ತಿಳಿಸುವೆನು, “ಇಗೋ, ಪಾರಸಿಯ ದೇಶದಲ್ಲಿ ಇನ್ನು ಮೂವರು ರಾಜರು ಏಳುವರು; ನಾಲ್ಕನೆಯ ರಾಜನು ಎಲ್ಲರಿಗಿಂತಲೂ ಅಧಿಕ ಧನವಂತನಾಗಿರುವನು; ಅವನು ತನ್ನ ಧನದಿಂದ ಪ್ರಬಲನಾಗಿ ಗ್ರೀಕ್ ರಾಜ್ಯಕ್ಕೆ ವಿರುದ್ಧವಾಗಿ ತನ್ನ ಬಲವನ್ನೆಲ್ಲಾ ಎಬ್ಬಿಸುವನು. 3 ಅನಂತರ ಪರಾಕ್ರಮಶಾಲಿಯಾದ ಒಬ್ಬ ರಾಜನು ಎದ್ದು ಮಹಾ ಪ್ರಭುತ್ವದಿಂದ ಆಳುತ್ತಾ, ತನ್ನ ಇಷ್ಟಾರ್ಥಗಳನ್ನು ಸಾಧಿಸಿಕೊಳ್ಳುವನು. 4 ಅವನು ತಲೆಯೆತ್ತಿದ ಮೇಲೆ ಅವನ ರಾಜ್ಯವು ಒಡೆದು ನಾಲ್ಕು ದಿಕ್ಕುಗಳಿಗೂ ನಾಲ್ಕು ಪಾಲಾಗುವುದು. ಅದು ಅವನ ಸಂತತಿಗೆ ಭಾಗವಾಗದು. ಅವನ ಆಳ್ವಿಕೆಯಲ್ಲಿ ರಾಜ್ಯವು ಪ್ರಬಲವಾಗಿದ್ದಂತೆ ಇನ್ನು ಪ್ರಬಲವಾಗದು. ಆ ರಾಜ್ಯವು ಕೀಳಲ್ಪಟ್ಟು ನಾಲ್ವರಿಗೆ ಮಾತ್ರವಲ್ಲದೆ ಇತರರಿಗೂ ಪಾಲಾಗುವುದು. 5 ದಕ್ಷಿಣ ರಾಜ್ಯದ ರಾಜನೂ,* 11:5 ದಕ್ಷಿಣ ರಾಜ್ಯದ ರಾಜನೂ, ಐಗುಪ್ತ ದೇಶದ ರಾಜನು. ಅವನ ಸರದಾರರಲ್ಲಿ ಒಬ್ಬನೂ ಬಲಗೊಳ್ಳುವರು. ಸರದಾರನು ರಾಜನಿಗಿಂತ ಹೆಚ್ಚು ಬಲಗೊಂಡು ಪ್ರಭುತ್ವಕ್ಕೆ ಬರುವನು. ಅವನ ರಾಜ್ಯವು ದೊಡ್ಡ ರಾಜ್ಯವಾಗಿರುವುದು. 6 ಕೆಲವು ವರ್ಷಗಳಾದ ಮೇಲೆ ಅವರು ಸೇರಿಕೊಳ್ಳುವರು. ದಕ್ಷಿಣ ದಿಕ್ಕಿನ ರಾಜನ ಕುಮಾರಿಯು ಉತ್ತರ ರಾಜ್ಯದ ರಾಜನೊಂದಿಗೆ† 11:6 ಉತ್ತರ ರಾಜ್ಯದ ರಾಜನೊಂದಿಗೆ ಸಿರಿಯಾ ದೇಶದ ರಾಜನು. ಒಪ್ಪಂದ ಮಾಡಿಕೊಳ್ಳಲಿಕ್ಕೆ ಬರುವಳು. ಆದರೂ ತನ್ನ ಭುಜಬಲವನ್ನು ಉಳಿಸಿಕೊಳ್ಳಲು ಆಗದು; ಅವನೂ, ಅವನ ತೋಳೂ ನಿಲ್ಲವು; ಅವಳೂ, ಅವಳನ್ನು ಕರೆದು ತಂದವರೂ, ಪಡೆದವನೂ, ತಕ್ಕೊಂಡವನೂ ಆ ಕಾಲದಲ್ಲಿ ನಾಶನಕ್ಕೆ ಈಡಾಗುವರು. 7 ಅನಂತರ ಅವಳು ಹುಟ್ಟಿದ ವಂಶವೃಕ್ಷದಲ್ಲಿ ಹುಟ್ಟಿದವರು ಅದರ ಸ್ಥಾನದಲ್ಲಿ ನಿಂತು ಉತ್ತರ ದಿಕ್ಕಿನ ರಾಜನ ಸೈನ್ಯಕ್ಕೆ ವಿರುದ್ಧವಾಗಿ ಹೊರಟು ಅವನ ದುರ್ಗದೊಳಗೆ ನುಗ್ಗಿ, ಅವರೊಡನೆ ಯುದ್ಧಮಾಡಿ, ಅವರನ್ನು ಗೆಲ್ಲುವರು. 8 ಅವರ ದೇವರುಗಳನ್ನೂ, ಎರಕದ ಬೊಂಬೆಗಳನ್ನೂ, ಒಳ್ಳೊಳ್ಳೆ ಬೆಳ್ಳಿಬಂಗಾರದ ಪಾತ್ರೆಗಳನ್ನೂ, ಸೂರೆ ಮಾಡಿಕೊಂಡು ಐಗುಪ್ತಕ್ಕೆ ಬಂದು, ಕೆಲವು ವರ್ಷಗಳ ತನಕ ಉತ್ತರ ದಿಕ್ಕಿನ ರಾಜನ ತಂಟೆಗೆ ಹೋಗುವುದಿಲ್ಲ. 9 ಬಳಿಕ ಉತ್ತರ ದಿಕ್ಕಿನ ರಾಜನು ದಕ್ಷಿಣ ದಿಕ್ಕಿನ ರಾಜನ ಮೇಲೆ ಯುದ್ಧಕ್ಕೆ ಬರುವನು. ಆದರೆ ತನ್ನ ಸ್ವದೇಶಕ್ಕೆ ಹಿಂದಿರುಗುವನು. 10 ಆ ಮೇಲೆ ಅವನ ಮಕ್ಕಳು ಯುದ್ಧ ಸನ್ನಾಹ ಮಾಡಿ ಮಹಾವ್ಯೂಹವಾದ ದೊಡ್ಡ ಸೈನ್ಯವನ್ನು ಕೂಡಿಸುವರು. ಆ ಸೈನ್ಯವು ಮುಂದುವರೆದು ತುಂಬಿತುಳುಕಿ ಹಬ್ಬಿಕೊಳ್ಳುವುದು. ಅವರು ಪುನಃ ಯುದ್ಧಕ್ಕೆ ಹೊರಟು ದಕ್ಷಿಣ ದಿಕ್ಕಿನ ರಾಜನ ದುರ್ಗದವರೆಗೆ ನುಗ್ಗುವರು. 11 ಆಗ ದಕ್ಷಿಣ ದಿಕ್ಕಿನ ರಾಜನು ಕ್ರೋಧದಿಂದ ಉರಿಯುತ್ತಾ ಹೊರಟು ಬಂದು, ಉತ್ತರ ದಿಕ್ಕಿನ ರಾಜನ ಸಂಗಡ ಯುದ್ಧ ಮಾಡುವನು. ಉತ್ತರ ದಿಕ್ಕಿನ ರಾಜನು ಮಹಾವ್ಯೂಹವನ್ನು ಕಟ್ಟಿದರೂ, ಅದೆಲ್ಲಾ ದಕ್ಷಿಣ ದಿಕ್ಕಿನ ರಾಜನ ಕೈಗೆ ಸಿಕ್ಕಿ ಒಯ್ಯಲ್ಪಡುವುದು. 12 ಆದುದರಿಂದ ಅವನ ಮನಸ್ಸು ಗರ್ವದಿಂದ ತುಂಬುವುದು. ಅವನು ಲಕ್ಷಾಂತರ ಸೈನಿಕರನ್ನು ಬೀಳಿಸಿದರೂ ಪ್ರಾಬಲ್ಯಕ್ಕೆ ಬರುವುದಿಲ್ಲ. 13 ತರುವಾಯ ಉತ್ತರ ದಿಕ್ಕಿನ ರಾಜನು ಹಿಂದಿನ ದಂಡಿಗಿಂತ ದೊಡ್ಡ ದಂಡನ್ನು ಮತ್ತೆ ಕೂಡಿಸಿ ಬಹಳ ವರ್ಷಗಳ ನಂತರ ಮಹಾ ಸೈನ್ಯದಿಂದಲೂ, ಅಧಿಕ ಆಯುಧಗಳ ಸಮೇತವಾಗಿಯೂ ಬರುವನು. 14 ಆ ಕಾಲದಲ್ಲಿ ಅನೇಕರು ದಕ್ಷಿಣ ದಿಕ್ಕಿನ ರಾಜನಿಗೆ ಎದುರು ನಿಲ್ಲುವರು. ಇದಲ್ಲದೆ ನಿನ್ನ ಜನರಲ್ಲಿ‡ 11:14 ನಿನ್ನ ಜನರಲ್ಲಿ ದಾನಿಯೇಲನ ಯೆಹೂದ್ಯ ಜನರು. ಹಿಂಸಕರು ಕನಸನ್ನು ನಿಜ ಮಾಡಬೇಕೆಂದು ದಂಗೆ ಏಳುವರು. ಆದರೆ ಬಿದ್ದುಹೋಗುವರು. 15 ಉತ್ತರ ದಿಕ್ಕಿನ ರಾಜನು ಬಂದು ದಿಬ್ಬ ಹಾಕಿ, ಕೋಟೆ ಕೊತ್ತಲದ ಪಟ್ಟಣವನ್ನು ಹಿಡಿಯುವನು; ದಕ್ಷಿಣದ ಭುಜಬಲವು ನಿಲ್ಲದು, ಅಲ್ಲಿನ ಮಹಾವೀರರು ತಡೆಯಲಾರರು, ಎದುರಿಸುವ ಯಾವ ಶಕ್ತಿಯೂ ಇರದು. 16 ದಕ್ಷಿಣ ದಿಕ್ಕಿನ ರಾಜನಿಗೆ ವಿರುದ್ಧವಾಗಿ ಬರುವವನು ತನ್ನ ಇಚ್ಛಾನುಸಾರ ನಡೆಯುವನು. ಅವನನ್ನು ಎದುರಿಸುವವರು ಯಾರು ಇಲ್ಲ, ನಾಶವನ್ನು ಕೈಯಲ್ಲಿಟ್ಟುಕೊಂಡು ಅಂದ ಚಂದದ ದೇಶದಲ್ಲಿ ನಿಂತಿರುವನು. 17 ದಕ್ಷಿಣ ದಿಕ್ಕಿನ ರಾಜನ ಮೇಲೆ ಬೀಳಬೇಕೆಂದು ನಿರ್ಧರಿಸಿ ತನ್ನ ರಾಜ್ಯದ ಸಮಸ್ತ ಬಲ ಸಮೇತನಾಗಿ ಹೊರಟು, ಅವನ ಸಂಗಡ ಒಪ್ಪಂದ ಮಾಡಿಕೊಳ್ಳುವನು. ಅವನ ರಾಜ್ಯದ ಹಾನಿಗಾಗಿ ಅವನಿಗೆ ಹೆಣ್ಣು ಮಗಳನ್ನು ಕೊಡುವನು. ಆದರೆ ಆ ಉಪಾಯವೂ ನಿಲ್ಲದು, ತನಗೆ ಅನುಕೂಲವಾಗುವುದಿಲ್ಲ. 18 ಆ ಮೇಲೆ ಅವನು ಕರಾವಳಿಯ ಕಡೆಗೆ ಕಣ್ಣಿಟ್ಟು ಅಲ್ಲಿ ಬಹಳ ದೇಶಗಳನ್ನು ಆಕ್ರಮಿಸುವನು. ಆದರೆ ಅವನು ಮಾಡುವ ನಿಂದೆಯನ್ನು ಒಬ್ಬ ಸರದಾರನು ನಿಲ್ಲಿಸಿ ಬಿಡುವುದಲ್ಲದೆ, ಅದು ಅವನ ಮೇಲೆಯೇ ತಿರುಗುವಂತೆ ಮಾಡುವನು. 19 ಆ ಮೇಲೆ ಸ್ವದೇಶದ ದುರ್ಗಗಳ ಕಡೆಗೆ ಹಿಂದಿರುಗಿ ಎಡವಿ ಬಿದ್ದು ಇಲ್ಲವಾಗುವನು. 20 ಅವನ ಸ್ಥಾನದಲ್ಲಿ ಮತ್ತೊಬ್ಬನು ಎದ್ದು, ರಾಜ್ಯದಲ್ಲಿ ಶಿರೋಮಣಿಯಾದ ದೇಶವನ್ನೆಲ್ಲ ದೋಚಿಕೊಳ್ಳತಕ್ಕವನನ್ನು ನೇಮಿಸುವನು. ಅವನು ಕೆಲವು ದಿನಗಳೊಳಗೆ ನಾಶವಾಗುವನು. ಅವನ ನಾಶ ಕೋಪದ ಪೆಟ್ಟಿನಿಂದಲ್ಲ, ಯುದ್ಧದಿಂದಲೂ ಅಲ್ಲ.
21 “ಅವನ ಸ್ಥಾನದಲ್ಲಿ ರಾಜ್ಯಪದವಿಗೆ ಹಕ್ಕುದಾರನಲ್ಲದ ಒಬ್ಬ ನೀಚನು ಎದ್ದು, ನೆಮ್ಮದಿಯ ಕಾಲದಲ್ಲಿ ಬಂದು ನಯವಾದ ನುಡಿಗಳಿಂದ ರಾಜ್ಯವನ್ನು ಪಡೆದುಕೊಳ್ಳುವನು. 22 ತುಂಬಿ ತುಳುಕುವ ವ್ಯೂಹಗಳೂ, ದೇವರ ನಿಬಂಧನಾಧಿಪತಿಯೂ§ 11:22 ನಿಬಂಧನಾಧಿಪತಿಯೂ ಯೆಹೂದ್ಯರ ಮಹಾಯಾಜಕನು. ಅವನ ರಭಸಕ್ಕೆ ಸಿಕ್ಕಿ ಹೊಡೆದುಕೊಂಡು ಹೋಗಿ ಭಂಗವಾಗುವರು. 23 ಅವನ ಸಂಗಡ ಒಪ್ಪಂದ ಮಾಡಿಕೊಂಡವನಿಗೆ ಕೂಡಲೆ ಮೋಸ ಮಾಡುವನು; ಸ್ವಲ್ಪ ಜನರ ಸಹಾಯದಿಂದ ಏಳಿಗೆಯಾಗಿ ಬಲಗೊಳ್ಳುವನು. 24 ನೆಮ್ಮದಿಯ ಕಾಲದಲ್ಲಿ ಸಂಸ್ಥಾನದ ಫಲವತ್ತಾದ ಪ್ರದೇಶಗಳ ಮೇಲೆ ನುಗ್ಗುವನು. ತಂದೆ, ತಾತಂದಿರು ಮಾಡದ ಕಾರ್ಯಗಳನ್ನು ಮಾಡುವನು, ಸೂರೆ, ಸುಲಿಗೆ, ಕೊಳ್ಳೆ ಹೊಡೆದವುಗಳನ್ನು ತನ್ನವರಿಗೆ ಚೆಲ್ಲಿಬಿಡುವನು. ಕೋಟೆಗಳನ್ನು ಹಿಡಿಯುವ ಕುತಂತ್ರಗಳನ್ನು ಕೊನೆಯವರೆಗೂ ಮುಂದುವರೆಸುವನು. 25 ಅವನು ದೊಡ್ಡ ದಂಡೆತ್ತಿ ದಕ್ಷಿಣ ದಿಕ್ಕಿನ ರಾಜನ ವಿರುದ್ಧವಾಗಿ ತನ್ನ ರಾಜ್ಯದ ಬಲವನ್ನೆಲ್ಲ ಕೂಡಿಸಿ ಧೈರ್ಯದಿಂದ ಹೊರಡುವನು. ದಕ್ಷಿಣ ದಿಕ್ಕಿನ ರಾಜನು ಅತ್ಯಧಿಕ ಬಲವುಳ್ಳ ಮಹಾ ಸೈನ್ಯಸಮೇತನಾಗಿ ಯುದ್ಧಕ್ಕೆ ಹೊರಡುವನು. ಆದರೆ ನಿಲ್ಲಲಾರನು, ಅವನು ಸೋಲುವ ಹಾಗೆ ಕುಯುಕ್ತಿಗಳನ್ನು ಕಲ್ಪಿಸುವನು. 26 ಅವನ ಮೃಷ್ಟಾನ್ನವನ್ನು ತಿನ್ನುವವರೇ ಅವನನ್ನು ಭಂಗಪಡಿಸುವರು; ಉತ್ತರ ದಿಕ್ಕಿನ ರಾಜನ ಸೈನ್ಯವು ತುಂಬಿ ತುಳುಕುವುದು. ಬಹಳ ಜನರು ಹತರಾಗಿ ಬೀಳುವರು. 27 ಆ ಇಬ್ಬರು ರಾಜರು ಒಬ್ಬರಿಗೊಬ್ಬರು ಕೇಡಿನ ಮನಸುಳ್ಳವರಾಗಿ ಸಹ ಪಂಕ್ತಿಯಲ್ಲಿ ಸುಳ್ಳುಸುಳ್ಳು ಮಾತನಾಡಿಕೊಳ್ಳುವರು. ಆದರೆ ಏನೂ ಸಾಗದು, ಪರಿಣಾಮವು ನಿಶ್ಚಿತ ಕಾಲದಲ್ಲೇ ತಲೆದೋರುವುದು. 28 ಅನಂತರ ಉತ್ತರ ದಿಕ್ಕಿನ ರಾಜನು ಬಹಳ ಆಸ್ತಿಯನ್ನು ಐಶ್ವರ್ಯವನ್ನು ಕೊಳ್ಳೆಹೊಡೆದು ಸ್ವದೇಶಕ್ಕೆ ಹಿಂದಿರುಗುವನು. ಅವನ ಮನಸ್ಸು ಪರಿಶುದ್ಧ ನಿಬಂಧನೆಗೆ ವಿರುದ್ಧವಾಗಿರುವುದು. ಅವನು ತನಗೆ ಇಷ್ಟ ಬಂದಂತೆ ಮಾಡಿ ಮತ್ತೆ ಸ್ವದೇಶವನ್ನು ಸೇರುವನು. 29 ನಿಶ್ಚಿತ ಕಾಲದಲ್ಲಿ ಪುನಃ ದಕ್ಷಿಣ ದಿಕ್ಕಿನ ದೇಶದ ಮೇಲೆ ನುಗ್ಗುವನು. ಆದರೆ ಮೊದಲು ಆದಂತೆಯೇ ಎರಡನೆಯ ಸಲ ಆಗದು. 30 ಅವನ ವಿರುದ್ಧವಾಗಿ ಕಿತ್ತೀಮಿನ ಹಡಗುಗಳು ಬರಲು, ಅವನು ಎದೆಗುಂದಿ ಹಿಂದಿರುಗಿ ಪರಿಶುದ್ಧ ನಿಬಂಧನೆಯ ಮೇಲೆ ಮತ್ಸರಗೊಂಡು ತನಗೆ ಇಷ್ಟ ಬಂದಂತೆ ಮಾಡುವನು. ಅವನು ಸ್ವದೇಶಕ್ಕೆ ಸೇರಿ ಪರಿಶುದ್ಧ ನಿಬಂಧನೆಯನ್ನು ತೊರೆದವರನ್ನು ಕಟಾಕ್ಷಿಸುವನು. 31 ಅವನು ಕೂಡಿಸುವ ಸೈನ್ಯವು ಆಶ್ರಯ ದುರ್ಗವಾದ ಪವಿತ್ರಾಲಯವನ್ನು ಹೊಲೆಗೆಡಿಸಿ, ನಿತ್ಯಹೋಮವನ್ನು ನೀಗಿಸಿ, ಹಾಳುಮಾಡುವ ಅಸಹ್ಯವಸ್ತುವನ್ನು ಪ್ರತಿಷ್ಠಿಸುವುದು. 32 ನಿಬಂಧನ ದ್ರೋಹಿಗಳು ಅವನ ನಯನುಡಿಗಳಿಂದ ಕೆಟ್ಟುಹೋಗುವರು. ತಮ್ಮ ದೇವರನ್ನು ಅರಿತವರೋ ದೃಢಚಿತ್ತರಾಗಿ ಕೃತಾರ್ಥರಾಗುವರು. 33 ಜನರಲ್ಲಿನ ಜ್ಞಾನಿಗಳು ಅನೇಕರಿಗೆ ವಿವೇಕ ಹೇಳಲಾಗಿ, ಅವರು ಬಹಳ ದಿನ ಕತ್ತಿ, ಬೆಂಕಿ, ಸೆರೆಸೂರೆಗಳಿಗೆ ಸಿಕ್ಕಿ ಬೀಳುವರು. 34 ಬೀಳುವಾಗ ಅವರಿಗೆ ಸ್ವಲ್ಪ ಸಹಾಯ ದೊರೆಯುವುದು. ಆ ಮೇಲೆ ಬಹಳ ಮಂದಿ ನಯವಾದ ನುಡಿಗಳನ್ನಾಡುತ್ತಾ ಅವರನ್ನು ಸೇರಿಕೊಳ್ಳುವರು. 35 ಜ್ಞಾನಿಗಳಲ್ಲಿಯೂ ಕೆಲವರು ಅಂತ್ಯಕಾಲದವರೆಗೆ ಬೀಳುತ್ತಿರುವರು. ಆದುದರಿಂದ ಜನರು ಶೋಧಿಸಲ್ಪಟ್ಟು, ಶುದ್ಧಿಹೊಂದಿ ಶುಭ್ರರಾಗುವರು. ಅಂತ್ಯವು ನಿಶ್ಚಿತಕಾಲದಲ್ಲೇ ಆಗುವುದು.
ತನ್ನನ್ನು ತಾನು ಹೆಚ್ಚಿಸಿಕೊಂಡ ಅರಸನು
36 “ರಾಜನು ತನ್ನ ಇಚ್ಛಾನುಸಾರ ನಡೆದು ತಾನು ಎಲ್ಲಾ ದೇವರುಗಳಿಗಿಂತ ದೊಡ್ಡವನೆಂದು ತನ್ನನ್ನು ಹೆಚ್ಚಿಸಿಕೊಂಡು ಗರ್ವದಿಂದ ಉಬ್ಬಿ, ದೇವಾಧಿ ದೇವನನ್ನು ಮಿತಿಮೀರಿ ದೂಷಿಸಿ ನಿಮ್ಮ ಮೇಲಿನ ದೈವ ಕೋಪವು ತೀರುವ ತನಕ ವೃದ್ಧಿಯಾಗಿರುವನು. ದೈವಸಂಕಲ್ಪವು ನೆರವೇರಲೇ ಬೇಕು. 37 ಅವನು ತನ್ನ ಪೂರ್ವಿಕರ ದೇವರುಗಳನ್ನಾಗಲಿ, ಸ್ತ್ರೀಯರು ಮೋಹಿಸುವ ದೇವರನ್ನಾಗಲಿ, ಯಾವ ದೇವರನ್ನಾಗಲಿ ಲಕ್ಷಿಸುವುದಿಲ್ಲ. ಎಲ್ಲಾ ದೇವರುಗಳಿಗಿಂತ ತನ್ನನ್ನೇ ಹೆಚ್ಚಿಸಿಕೊಳ್ಳುವನು. 38 ಕುಲದೇವರಿಗೆ ಬದಲಾಗಿ ದುರ್ಗಾಭಿಮಾನಿ ದೇವರನ್ನು ಘನಪಡಿಸುವನು; ಪೂರ್ವಿಕರಿಗೆ ತಿಳಿಯದ ದೇವರನ್ನು ಬೆಳ್ಳಿಬಂಗಾರದಿಂದಲೂ, ರತ್ನಗಳಿಂದಲೂ, ಅಮೂಲ್ಯ ವಸ್ತುಗಳಿಂದಲೂ ಸೇವಿಸುವನು. 39 ಅನ್ಯದೇವರ ಸಹಾಯದಿಂದ ಬಲವಾದ ಕೋಟೆಗಳನ್ನು ಆಕ್ರಮಿಸುವನು;* 11:39 ಅನ್ಯದೇವರ ಸಹಾಯದಿಂದ ಬಲವಾದ ಕೋಟೆಗಳನ್ನು ಆಕ್ರಮಿಸುವನು; ತನ್ನ ಕೋಟೆಗಳನ್ನು ಭದ್ರಪಡಿಸುವುದಕ್ಕಾಗಿ ಅನ್ಯದೇವರ ಆರಾಧಕರನ್ನು ಆತುಕೊಳ್ಳುವನು. ಯಾರನ್ನು ಕಟಾಕ್ಷಿಸುವನೋ ಅವರಿಗೆ ಮಹಿಮೆ ಹೆಚ್ಚುವುದು; ಬಹಳ ಜನರ ಮೇಲೆ ಆಳ್ವಿಕೆಯನ್ನು ನಡೆಸುವನು; ದೇಶವನ್ನು ಕ್ರಯಕ್ಕೆ ಹಂಚುವನು.
ಅಂತ್ಯಕಾಲ
40 “ಅಂತ್ಯಕಾಲದಲ್ಲಿ ದಕ್ಷಿಣ ದಿಕ್ಕಿನ ರಾಜನು ಉತ್ತರ ದಿಕ್ಕಿನ ರಾಜನ ಮೇಲೆ ಬೀಳಲು, ಅವನು ರಥಾಶ್ವಬಲಗಳಿಂದಲೂ, ಬಹು ನಾವೆಗಳಿಂದಲೂ ಕೂಡಿ ದಕ್ಷಿಣ ದಿಕ್ಕಿನ ರಾಜನ ಮೇಲೆ ರಭಸವಾಗಿ ಬಿದ್ದು ಎಲ್ಲಾ ನಾಡುನಾಡುಗಳಲ್ಲಿ ನುಗ್ಗಿ, ತುಂಬಿ ತುಳುಕಿ ಹರಡಿಕೊಳ್ಳುವನು. 41 ಅಂದ ಚಂದದ ದೇಶಕ್ಕೂ ನುಗ್ಗುವನು. ಅನೇಕ ಸೀಮೆಗಳು ಅವನಿಂದ ಹಾಳಾಗುವವು. ಆದರೆ ಎದೋಮ್ಯರು, ಮೋವಾಬ್ಯರು, ಅಮ್ಮೋನಿನ ಹೆಚ್ಚಿನ ಭಾಗದವರು, ಅವನ ಕೈಯಿಂದ ತಪ್ಪಿಸಿಕೊಳ್ಳುವರು. 42 ಅವನು ದೇಶಗಳ ಮೇಲೆ ಕೈಮಾಡಲು ಐಗುಪ್ತ ದೇಶವೂ ತನ್ನನ್ನು ರಕ್ಷಿಸಿಕೊಳ್ಳದು. 43 ಅವನು ಬೆಳ್ಳಿ ಬಂಗಾರಗಳ ನಿಧಿನಿಕ್ಷೇಪಗಳನ್ನೂ, ಐಗುಪ್ತದ ಒಳ್ಳೊಳ್ಳೆಯ ಸಮಸ್ತ ವಸ್ತುಗಳನ್ನೂ ವಶಮಾಡಿಕೊಳ್ಳುವನು. ಲೂಬ್ಯರೂ, ಕೂಷ್ಯರೂ ಅವನನ್ನು ಹಿಂಬಾಲಿಸಿ ಹೋಗುವರು. 44 ಹೀಗಿರಲು ಪೂರ್ವದಿಂದಲೂ, ಉತ್ತರದಿಂದಲೂ ಬರುವ ಸುದ್ದಿಯು ಅವನನ್ನು ಬಾಧಿಸುವುದು ಅವನು ಅತಿ ರೋಷಗೊಂಡು ಬಹಳ ಜನರನ್ನು ಧ್ವಂಸ ಮಾಡಿ, ನಿರ್ನಾಮ ಮಾಡುವುದಕ್ಕೆ ಹೊರಡುವನು. 45 ಸಮುದ್ರಕ್ಕೂ, ಅಂದ ಚಂದದ ಪರಿಶುದ್ಧ ಪರ್ವತಕ್ಕೂ ನಡುವೆ ಅರಮನೆಯಂಥ ತನ್ನ ಗುಡಾರಗಳನ್ನು ಹಾಕಿಸುವನು. ಆಹಾ, ಅವನು ಕೊನೆಗಾಣುವನು, ಯಾರೂ ಅವನಿಗೆ ಸಹಾಯ ಮಾಡರು.”
*11:5 11:5 ದಕ್ಷಿಣ ರಾಜ್ಯದ ರಾಜನೂ, ಐಗುಪ್ತ ದೇಶದ ರಾಜನು.
†11:6 11:6 ಉತ್ತರ ರಾಜ್ಯದ ರಾಜನೊಂದಿಗೆ ಸಿರಿಯಾ ದೇಶದ ರಾಜನು.
‡11:14 11:14 ನಿನ್ನ ಜನರಲ್ಲಿ ದಾನಿಯೇಲನ ಯೆಹೂದ್ಯ ಜನರು.
§11:22 11:22 ನಿಬಂಧನಾಧಿಪತಿಯೂ ಯೆಹೂದ್ಯರ ಮಹಾಯಾಜಕನು.
*11:39 11:39 ಅನ್ಯದೇವರ ಸಹಾಯದಿಂದ ಬಲವಾದ ಕೋಟೆಗಳನ್ನು ಆಕ್ರಮಿಸುವನು; ತನ್ನ ಕೋಟೆಗಳನ್ನು ಭದ್ರಪಡಿಸುವುದಕ್ಕಾಗಿ ಅನ್ಯದೇವರ ಆರಾಧಕರನ್ನು ಆತುಕೊಳ್ಳುವನು.