27
ಆ ಸಮಯದಲ್ಲಿ ಯೆಹೋವನು ವಂಚನೆಯ ಸರ್ಪವಾದ ಲಿವ್ಯಾತಾನನಿಗೆ ನ್ಯಾಯತೀರಿಸುವನು.
ಯೆಹೋವನು ಕಠಿಣವೂ ಮಹತ್ವವೂ ಬಲವೂ ಆಗಿರುವ ತನ್ನ ಖಡ್ಗದಿಂದ
ಸುತ್ತಿಕೊಂಡಿರುವ ಸರ್ಪವಾದ ಲಿವ್ಯಾತಾನನನ್ನು ಕೊಲ್ಲುವನು.
ಯೆಹೋವನು ಸಮುದ್ರದಲ್ಲಿರುವ ಘಟಸರ್ಪವನ್ನು ಕೊಲ್ಲುವನು.
 
ಆ ಸಮಯದಲ್ಲಿ ಜನರು ಮನೋಹರವಾದ ದ್ರಾಕ್ಷಿತೋಟದ ವಿಷಯವಾಗಿ ಹಾಡುವರು.
“ಯೆಹೋವನಾದ ನಾನು ಆ ತೋಟವನ್ನು ಚೆನ್ನಾಗಿ ನೋಡಿಕೊಳ್ಳುವೆನು;
ಸರಿಯಾದ ಕಾಲದಲ್ಲಿ ತೋಟಕ್ಕೆ ನೀರು ಹೊಯ್ಯುವೆನು.
ಹಗಲಿರುಳು ತೋಟವನ್ನು ಕಾಯುವೆನು.
ಆ ತೋಟವನ್ನು ಯಾರೂ ಹಾಳುಮಾಡುವದಿಲ್ಲ.
ನಾನು ಕೋಪಗೊಂಡಿಲ್ಲ.
ಆದರೆ ಯುದ್ಧ ನಡೆಯುತ್ತಿರುವಾಗ ಯಾರಾದರೂ ಮುಳ್ಳುಬೇಲಿಯನ್ನು ಹಾಕಿದರೆ,
ನಾನು ಮುನ್ನುಗ್ಗಿ ಅದನ್ನು ಸುಟ್ಟುಹಾಕುವೆನು.
ಆದರೆ ಯಾವನಾದರೂ ಆಶ್ರಯಕ್ಕಾಗಿ ನನ್ನ ಬಳಿಗೆ ಬಂದು ನನ್ನೊಡನೆ ಸಮಾಧಾನ ಮಾಡಿಕೊಳ್ಳುವುದಾದರೆ
ಅವನು ನನ್ನ ಬಳಿಗೆ ಬಂದು ಸಮಾಧಾನದಲ್ಲಿರಲಿ.
ಜನರು ನನ್ನ ಬಳಿಗೆ ಬರುವರು. ಆ ಜನರು ಮುಂದಿನ ಕಾಲದಲ್ಲಿ ಯಾಕೋಬನನ್ನು ಆಳವಾದ ಬೇರುಳ್ಳ ಗಿಡದಂತೆ ಬಲಶಾಲಿಯನ್ನಾಗಿ ಮಾಡುವರು.
ಬೆಳೆದು ಹೂಬಿಡುವ ಗಿಡದಂತೆ ಅವರು ಇಸ್ರೇಲಿಗೆ ಮಾಡುವರು.
ಹಣ್ಣುಗಳಂತೆ ಇಸ್ರೇಲರ ಮಕ್ಕಳು ಭೂಮಿಯ ಮೇಲೆ ತುಂಬಿಹೋಗುವರು.”
ದೇವರು ಇಸ್ರೇಲರನ್ನು ಕಳುಹಿಸಿ ಬಿಡುವನು
ಯೆಹೋವನು ತನ್ನ ಜನರನ್ನು ಹೇಗೆ ಶಿಕ್ಷಿಸುವನು? ಹಿಂದಿನ ಕಾಲದಲ್ಲಿ ಶತ್ರುಗಳು ಜನರನ್ನು ಗಾಯಪಡಿಸಿದರು. ಯೆಹೋವನೂ ಹಾಗೆ ಮಾಡುವನೇ? ಹಿಂದಿನ ಕಾಲದಲ್ಲಿ ಅನೇಕ ಮಂದಿ ಕೊಲ್ಲಲ್ಪಟ್ಟರು. ಹಾಗೆಯೇ ಯೆಹೋವನು ಜನರನ್ನು ಕೊಲ್ಲುವನೇ?
ಯೆಹೋವನು ತನ್ನ ಜನರನ್ನು ದೂರದೇಶಕ್ಕೆ ಕಳುಹಿಸುವದರ ಮೂಲಕ ಅವರನ್ನು ಶಿಕ್ಷಿಸುವನು. ಇಸ್ರೇಲರೊಂದಿಗೆ ಯೆಹೋವನು ಕಟುವಾಗಿ ಮಾತನಾಡುವನು. ಆತನ ಮಾತುಗಳು ಮರುಭೂಮಿಯ ಬಿಸಿಗಾಳಿಯಂತೆ ಸುಡುವವು.
ಯಾಕೋಬನ ದೋಷವು ಹೇಗೆ ಕ್ಷಮಿಸಲ್ಪಡುವದು? ಅವನ ಪಾಪಗಳು ನಿವಾರಣೆಯಾಗುವದಕ್ಕೆ ಏನು ಮಾಡಬೇಕಾಗುವದು? ಇತರ ದೇವತೆಗಳ ಪೂಜಾಸ್ಥಳಗಳೂ ವೇದಿಕೆಯ ಕಲ್ಲುಗಳೂ ಪುಡಿಪುಡಿಯಾಗಿ ನಾಶವಾಗುವವು.
10 ಆ ಸಮಯದಲ್ಲಿ ಆ ಮಹಾನಗರವು ನಿರ್ಜನವಾಗಿರುವದು. ಅದು ಮರುಭೂಮಿಯಂತಿರುವದು. ಜನರೆಲ್ಲರೂ ಹೊರಟುಹೋಗಿರುವರು. ಅವರು ಪಲಾಯನಗೈದಿದ್ದಾರೆ. ನಗರವು ತೆರೆದ ಹುಲ್ಲುಗಾವಲಿನಂತಿರುವುದು. ಪಶುಗಳು ಅಲ್ಲಿ ಹುಲ್ಲನ್ನು ಮೇಯುತ್ತವೆ. ದನಗಳು ದ್ರಾಕ್ಷಾಲತೆಯ ಚಿಗುರೆಲೆಗಳನ್ನು ತಿನ್ನುವವು. 11 ದ್ರಾಕ್ಷಿಬಳ್ಳಿ ಒಣಗಿಹೋಗುವದು. ಅದರ ಕೊಂಬೆಗಳು ಮುರಿದುಬೀಳುವವು. ಹೆಂಗಸರು ಆ ಕೊಂಬೆಗಳನ್ನು ಸೌದೆಯಾಗಿ ಉಪಯೋಗಿಸುವರು.
ಜನರು ತಿಳಿದುಕೊಳ್ಳುವದಕ್ಕೆ ಮನಸ್ಸು ಕೊಡುವದಿಲ್ಲ. ಆದ್ದರಿಂದ ಅವರ ನಿರ್ಮಾಣಿಕನಾದ ದೇವರು ಅವರನ್ನು ಸಂತೈಸುವದಿಲ್ಲ. ಅವರ ನಿರ್ಮಾಣಿಕನು ಅವರಿಗೆ ದಯೆ ತೋರುವದಿಲ್ಲ.
12 ಆ ಸಮಯದಲ್ಲಿ, ಯೆಹೋವನು ತನ್ನ ಜನರನ್ನು ಬೇರೆಯವರಿಂದ ಬೇರ್ಪಡಿಸುವನು. ಆತನು ಯೂಫ್ರೇಟೀಸ್ ನದಿಯಿಂದ ಪ್ರಾರಂಭಿಸಿ ಈಜಿಪ್ಟಿನ ನದಿಯತನಕ ಎಲ್ಲಾ ಜನರನ್ನು ಒಟ್ಟುಗೂಡಿಸುವನು.
ಇಸ್ರೇಲ್ ಜನರೇ, ನೀವು ಒಬ್ಬೊಬ್ಬರಾಗಿಯೇ ಒಟ್ಟುಗೂಡಿಸಲ್ಪಡುವಿರಿ. 13 ನನ್ನ ಜನರಲ್ಲಿ ಹೆಚ್ಚಿನವರು ಅಶ್ಶೂರದಲ್ಲಿ ಈಗ ಕಳೆದುಹೋಗಿರುತ್ತಾರೆ; ಕೆಲವರು ಈಜಿಪ್ಟಿಗೆ ಓಡಿಹೋಗಿದ್ದಾರೆ. ಆ ಸಮಯದಲ್ಲಿ ಮಹಾದೊಡ್ಡ ತುತ್ತೂರಿಯ ಶಬ್ದವು ಕೇಳಿಸುವದು. ಆಗ ಆ ಜನರೆಲ್ಲರೂ ಜೆರುಸಲೇಮಿಗೆ ಹಿಂತಿರುಗುವರು. ಆ ಜನರು ಪರಿಶುದ್ಧ ಪರ್ವತದ ಮೇಲೆ ಯೆಹೋವನ ಮುಂದೆ ಅಡ್ಡಬೀಳುವರು.