3
ಮಹಾಯಾಜಕನಿಗಾಗಿ ಶುದ್ಧ ಬಟ್ಟೆಗಳು
1 ಆತನು ನನಗೆ, ಯೆಹೋವ ದೇವರ ದೂತನ ಮುಂದೆ ನಿಂತಿರುವ ಮಹಾಯಾಜಕನಾದ ಯೆಹೋಶುವನನ್ನೂ, ಅವನ ಮೇಲೆ ದೂರು ಹೇಳುವುದಕ್ಕೆ ಅವನ ಬಲಗಡೆಯಲ್ಲಿ ನಿಂತ ಸೈತಾನನನ್ನೂ ತೋರಿಸಿದನು. 2 ಆಗ ಯೆಹೋವ ದೇವರ ದೂತನು ಸೈತಾನನಿಗೆ, “ಸೈತಾನನೇ, ಯೆಹೋವ ದೇವರು ನಿನ್ನನ್ನು ಖಂಡಿಸಲಿ. ಯೆರೂಸಲೇಮನ್ನು ಆಯ್ದುಕೊಂಡ ಯೆಹೋವ ದೇವರು ನಿನ್ನನ್ನು ಖಂಡಿಸಲಿ. ಅದು ಬೆಂಕಿಯೊಳಗಿಂದ ಎಳೆದ ಕೊಳ್ಳಿಯಾಗಿದೆಯಲ್ಲವೋ?” ಎಂದನು.
3 ಯೆಹೋಶುವನು ಮೈಲಿಗೆಯಾದ ವಸ್ತ್ರಗಳನ್ನು ತೊಟ್ಟುಕೊಂಡವನಾಗಿ ದೇವದೂತನ ಮುಂದೆ ನಿಂತನು. 4 ಆಗ ದೇವದೂತನು ತನ್ನ ಮುಂದೆ ನಿಂತವರಿಗೆ, “ಇವನ ಮೇಲಿನಿಂದ ಮೈಲಿಗೆಯಾದ ವಸ್ತ್ರಗಳನ್ನು ತೆಗೆದುಹಾಕಿರಿ,” ಎಂದನು.
ಅನಂತರ ಯೆಹೋಶುವನಿಗೆ, “ನಿನ್ನ ಪಾಪವನ್ನು ತೆಗೆದುಹಾಕಿದ್ದೇನೆ. ಬದಲಾಗಿ ಶ್ರೇಷ್ಠ ವಸ್ತ್ರಗಳನ್ನು ನಿನಗೆ ತೊಡಿಸುವೆನು,” ಎಂದನು.
5 ಆಗ ನಾನು, “ಅವನ ತಲೆಯ ಮೇಲೆ ಶುದ್ಧ ಮುಂಡಾಸನ್ನು ಇಡಿರಿ,” ಎಂದೆನು. ಆಗ ಸೇವಕರು ಯೆಹೋಶುವನ ತಲೆಯ ಮೇಲೆ ಶುದ್ಧ ಮುಂಡಾಸವನ್ನು ಇಟ್ಟು, ಅವನಿಗೆ ವಸ್ತ್ರಗಳನ್ನು ಧರಿಸಿದರು. ಯೆಹೋವ ದೇವರ ದೂತನು ಪಕ್ಕದಲ್ಲಿ ನಿಂತಿದ್ದನು.
6 ಆಗ ಯೆಹೋವ ದೇವರ ದೂತನು ಯೆಹೋಶುವನಿಗೆ ಸಾಕ್ಷಿ ಕೊಟ್ಟಿದ್ದೇನೆಂದರೆ, 7 “ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ನೀನು ನನ್ನ ಮಾರ್ಗಗಳಲ್ಲಿ ನಡೆದು ನನ್ನ ಆಜ್ಞೆಗಳನ್ನು ಕೈಗೊಂಡರೆ, ಆಗ ನೀನು ನನ್ನ ಆಲಯಕ್ಕೂ ನ್ಯಾಯತೀರಿಸಿ, ನನ್ನ ಅಂಗಳಗಳನ್ನೂ ಕಾಯುವೆ. ಇಲ್ಲಿ ನಿಂತವರ ಬಳಿಯಲ್ಲಿ ನಡೆದಾಡುವ ಹಕ್ಕನ್ನು ನಿನಗೆ ಕೊಡುವೆನು.’
8 “ಮಹಾಯಾಜಕನಾದ ಯೆಹೋಶುವನೇ, ನೀನೂ, ನಿನ್ನ ಮುಂದೆ ಕುಳಿತುಕೊಳ್ಳುವ ನಿನ್ನ ಸಂಗಡಿಗರೂ ಈಗ ಕೇಳಿರಿ. ಅವರು ಆಶ್ಚರ್ಯವನ್ನುಂಟುಮಾಡುವ ಮನುಷ್ಯರಾಗಿದ್ದಾರೆ. ನಾನು ‘ರೆಂಬೆ’ ಎಂಬ ನನ್ನ ಸೇವಕನನ್ನು ಬರಮಾಡುವೆನು ಎಂಬುದಕ್ಕೆ ಇವರೇ ಮುಂಗುರುತು. 9 ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು ನೋಡು. ಆ ಒಂದು ಕಲ್ಲಿನ ಮೇಲೆ ಏಳು ಕಣ್ಣುಗಳು ಇರುವಂತೆ ನಾನು ಅದರ ಮೇಲೆ ಒಂದು ಶಾಸನವನ್ನು ಕೆತ್ತಿಸುವೆನು. ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. ಆ ದೇಶದ ಅಪರಾಧವನ್ನು ಒಂದೇ ದಿವಸದಲ್ಲಿ ತೊಲಗಿಸುವೆನು.
10 “ ‘ಆ ದಿವಸದಲ್ಲಿ ನೀವು ನಿಮ್ಮ ನಿಮ್ಮ ನೆರೆಯವರನ್ನು ದ್ರಾಕ್ಷಿಬಳ್ಳಿಯ ಕೆಳಗೂ, ಅಂಜೂರದ ಮರದ ಕೆಳಗೂ ಕರೆಯುವಿರಿ,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.”