3
ಯೋನನು ನಿನೆವೆಗೆ ಹೋದದ್ದು
1 ಯೆಹೋವ ದೇವರ ವಾಕ್ಯವು ಎರಡನೆಯ ಸಾರಿ ಯೋನನಿಗೆ ಬಂದಿತು. 2 “ಎದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ, ನಾನು ನಿನಗೆ ಹೇಳಿದ ಸಂದೇಶವನ್ನು ಅದರ ನಿವಾಸಿಗಳಿಗೆ ಸಾರು,” ಎಂದು ಹೇಳಿದರು.
3 ಹೀಗೆ ಯೋನನು ಯೆಹೋವ ದೇವರ ಮಾತಿಗೆ ವಿಧೇಯನಾಗಿ ನಿನೆವೆಗೆ ಹೋದನು. ನಿನೆವೆಯು ಮೂರು ದಿವಸದ ಪ್ರಯಾಣದ ಮಹಾ ದೊಡ್ಡ ಪಟ್ಟಣವಾಗಿತ್ತು. 4 ಆಗ ಯೋನನು ಒಂದು ದಿವಸದ ಪ್ರಯಾಣಮಾಡಿ, ಪಟ್ಟಣದಲ್ಲಿ ಪ್ರವೇಶಿಸಿ, “ಇನ್ನು ನಾಲ್ವತ್ತು ದಿವಸಗಳಾದ ಮೇಲೆ ನಿನೆವೆ ನಾಶವಾಗುವುದು,” ಎಂದು ಕೂಗಿ ಹೇಳಿದನು. 5 ನಿನೆವೆಯ ಮನುಷ್ಯರು, ದೇವರನ್ನು ನಂಬಿ, ಉಪವಾಸವನ್ನು ಸಾರಿ, ಅವರಲ್ಲಿ ದೊಡ್ಡವನು ಮೊದಲುಗೊಂಡು ಚಿಕ್ಕವನವರೆಗೂ ಗೋಣಿತಟ್ಟನ್ನು ಉಟ್ಟುಕೊಂಡರು.
6 ಆ ಮಾತು ನಿನೆವೆಯ ಅರಸನಿಗೆ ಮುಟ್ಟಿದಾಗ, ಅವನು ತನ್ನ ಸಿಂಹಾಸನದಿಂದ ಎದ್ದು, ತನ್ನ ನಿಲುವಂಗಿಯನ್ನು ತೆಗೆದಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು, ಬೂದಿಯಲ್ಲಿ ಕುಳಿತುಕೊಂಡನು. 7 ಅವನು ನಿನೆವೆಯಲ್ಲಿ ಈ ಘೋಷಣೆಯನ್ನು ಮಾಡಿದನು:
“ಅರಸನ ಮತ್ತು ಶ್ರೇಷ್ಠರ ತೀರ್ಪಿನ ಪ್ರಕಾರ:
“ಮನುಷ್ಯರಾಗಲಿ, ಮೃಗಗಳಾಗಲಿ, ದನಗಳಾಗಲಿ, ಕುರಿಗಳಾಗಲಿ, ಏನನ್ನೂ ರುಚಿ ನೋಡದಿರಲಿ, ಮೇಯದಿರಲಿ, ನೀರನ್ನು ಕುಡಿಯದಿರಲಿ. 8 ಆದರೆ ಮನುಷ್ಯರೂ ಮೃಗಗಳೂ ಗೋಣಿತಟ್ಟು ಹಾಕಿಕೊಂಡು, ಜೋರಾದ ಧ್ವನಿಯಿಂದ ದೇವರಿಗೆ ಮೊರೆಯಿಡಲಿ. ಎಲ್ಲರೂ ತಮ್ಮ ತಮ್ಮ ದುರ್ಮಾರ್ಗಗಳನ್ನೂ, ತಮ್ಮ ತಮ್ಮ ಕೈಗಳಲ್ಲಿರುವ ಹಿಂಸಾಚಾರವನ್ನೂ ಬಿಟ್ಟು ತಿರುಗಲಿ. 9 ಹೀಗೆ ಮಾಡಿದರೆ, ದೇವರು ಒಂದು ವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ಅನುಕಂಪದಿಂದ ತಮ್ಮ ಉಗ್ರಕೋಪವನ್ನು ತಡೆದು, ನಾವು ನಾಶವಾಗದೆ ಉಳಿಸುವರೇನೋ, ಯಾರು ಬಲ್ಲರು?”
10 ಆಗ ದೇವರು, ನಿನೆವೆಯವರು ತಮ್ಮ ದುರ್ಮಾರ್ಗವನ್ನು ಬಿಟ್ಟು ತಿರುಗಿಕೊಂಡರೆಂದು ಕಂಡು, ತಾವು ವಿಧಿಸುವುದಾಗಿ ನುಡಿದ ವಿನಾಶವನ್ನು ಅವರ ಮೇಲೆ ಬರಮಾಡದೆ, ಅವರನ್ನು ಕನಿಕರಿಸಿದರು.