13
ಸಮುದ್ರದಿಂದ ಹೊರಬಂದ ಮೃಗ
1 ಘಟಸರ್ಪವು ಸಮುದ್ರತೀರದ ಮರಳಿನ ಮೇಲೆ ನಿಂತನು. ಸಮುದ್ರದೊಳಗೆ ಒಂದು ಮೃಗವು ಏರಿಬರುವುದನ್ನು ಕಂಡೆನು. ಅದಕ್ಕೆ ಹತ್ತು ಕೊಂಬುಗಳೂ ಏಳು ತಲೆಗಳೂ ಕೊಂಬುಗಳ ಮೇಲೆ ಹತ್ತು ಮುಕುಟಗಳೂ ತಲೆಗಳ ಮೇಲೆ ದೇವದೂಷಣೆಯ ನಾಮಗಳೂ ಇದ್ದವು. 2 ನಾನು ಕಂಡ ಮೃಗವು ಚಿರತೆಯಂತಿತ್ತು. ಅದರ ಕಾಲುಗಳು ಕರಡಿಯ ಕಾಲುಗಳಂತೆಯೂ ಅದರ ಬಾಯಿ ಸಿಂಹದ ಬಾಯಂತೆಯೂ ಇದ್ದವು. ಅದಕ್ಕೆ ಘಟಸರ್ಪನು ತನ್ನ ಶಕ್ತಿಯನ್ನೂ ಸಿಂಹಾಸನವನ್ನೂ ಮಹಾ ಅಧಿಕಾರವನ್ನೂ ಕೊಟ್ಟನು. 3 ಮೃಗದ ತಲೆಗಳಲ್ಲಿ ಒಂದು ಮರಣಾಂತಿಕ ಗಾಯ ಹೊಂದಿದಂತಿರುವುದನ್ನು ನೋಡಿದೆನು. ಆದರೆ ಆ ಮರಣಕರವಾದ ಗಾಯವು ವಾಸಿಯಾಯಿತು. ಭೂಲೋಕವೆಲ್ಲಾ ಆ ಮೃಗವನ್ನು ಕಾಣುತ್ತಾ ಆಶ್ಚರ್ಯಪಟ್ಟಿತು. 4 ಜನರು ಘಟಸರ್ಪನು ಆ ಮೃಗಕ್ಕೆ ಅಧಿಕಾರವನ್ನು ಕೊಟ್ಟಿದ್ದರಿಂದ, ಆ ಘಟಸರ್ಪನನ್ನು ಆರಾಧಿಸಿದರು. ಇದಲ್ಲದೆ ಆ ಮೃಗವನ್ನೂ ಆರಾಧಿಸಿ, “ಈ ಮೃಗಕ್ಕೆ ಸಮಾನರು ಯಾರು? ಇದರೊಡನೆ ಯುದ್ಧಮಾಡಬಲ್ಲವರು ಯಾರು?” ಎಂದರು.
5 ಆ ಮೃಗಕ್ಕೆ ಬಡಾಯಿ ಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡುವ ಬಾಯಿ ಕೊಡಲಾಯಿತು. ನಲವತ್ತೆರಡು ತಿಂಗಳುಗಳವರೆಗೆ ಕಾರ್ಯಸಾಧಿಸುವ ಅಧಿಕಾರವನ್ನೂ ಅದಕ್ಕೆ ಕೊಡಲಾಯಿತು. 6 ಆ ಮೃಗವು ತನ್ನ ಬಾಯಿತೆರೆದು, ದೇವರಿಗೆ ವಿರುದ್ಧವಾಗಿ ದೂಷಿಸಿ, ಅವರ ನಾಮವನ್ನೂ ಅವರ ನಿವಾಸವನ್ನೂ ಮತ್ತು ಪರಲೋಕ ನಿವಾಸಿಗಳನ್ನೂ ದೂಷಿಸಿತು. 7 ಇದಲ್ಲದೆ ಅದಕ್ಕೆ ಪರಿಶುದ್ಧರ ಮೇಲೆ ಯುದ್ಧಮಾಡಿ, ಅವರನ್ನು ಜಯಿಸುವುದಕ್ಕೆ ಬಲವು ಕೊಡಲಾಯಿತು ಮತ್ತು ಸಕಲ ಕುಲ, ಪ್ರಜೆ, ಭಾಷೆ, ರಾಷ್ಟ್ರಗಳ ಮೇಲೆ ಅದಕ್ಕೆ ಅಧಿಕಾರವು ಸಹ ಕೊಡಲಾಯಿತು. 8 ಜಗದುತ್ಪತ್ತಿಗೆ ಮೊದಲೇ ಕೊಯ್ಯಲಾದ ಕುರಿಮರಿಯವರ ಜೀವಗ್ರಂಥದಲ್ಲಿ ಯಾರ‍್ಯಾರ ಹೆಸರುಗಳು ಬರೆದಿರುವುದಿಲ್ಲವೋ, ಆ ಭೂನಿವಾಸಿಗಳೆಲ್ಲರೂ ಆ ಮೃಗವನ್ನು ಆರಾಧಿಸುವರು.
9 ಕಿವಿಯುಳ್ಳವನು ಕೇಳಲಿ.
10 “ಸೆರೆಹಿಡಿಯುವವನು
ತಾನೇ ಸೆರೆಯಾಗಿ ಹೋಗುವನು.
ಕತ್ತಿಯಿಂದ ಕೊಲ್ಲುವವನು
ಕತ್ತಿಯಿಂದಲೇ ಕೊಲೆಯಾಗುವನು.”* 13:10 ಯೆರೆ 15:2
ಇದರಲ್ಲಿ ದೇವಜನರ ಸೈರಣೆಯೂ ನಂಬಿಕೆಯೂ ಇವೆ.
ಭೂಮಿಯೊಳಗಿಂದ ಬಂದ ಮೃಗ
11 ಮತ್ತೊಂದು ಮೃಗವು ಭೂಮಿಯೊಳಗಿಂದ ಬರುವುದನ್ನು ಕಂಡೆನು. ಅದಕ್ಕೆ ಕುರಿಮರಿಗಿರುವಂತೆ ಎರಡು ಕೊಂಬುಗಳಿದ್ದವು ಆದರೆ ಘಟಸರ್ಪದಂತೆ ಮಾತನಾಡಿತು. 12 ಇದು ಮೊದಲನೆಯ ಮೃಗದ ಅಧಿಕಾರವನ್ನೆಲ್ಲಾ ಅದರ ಎದುರಿನಲ್ಲಿ ಚಲಾಯಿಸಿತು. ಇದು ಮರಣಕರವಾದ ಗಾಯದಿಂದ ವಾಸಿಯಾದ ಮೊದಲನೆಯ ಮೃಗವನ್ನು ಭೂಲೋಕವೂ ಭೂನಿವಾಸಿಗಳೂ ಆರಾಧಿಸುವಂತೆ ಮಾಡಿತು. 13 ಎರಡನೆಯ ಮೃಗವೂ ಮಹಾಸೂಚಕಕಾರ್ಯಗಳನ್ನು ನಡೆಸಿತು ಮತ್ತು ಜನರ ಮುಂದೆ ಬೆಂಕಿ ಆಕಾಶದಿಂದ ಭೂಮಿಗೆ ಬೀಳುವಂತೆ ಮಾಡಿತು. 14 ಆ ಮೊದಲನೆಯ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡುವ ಅಧಿಕಾರವನ್ನು ಕೊಡಲಾಗಿದ್ದರಿಂದ ಭೂನಿವಾಸಿಗಳನ್ನು ಮೋಸಗೊಳಿಸುತ್ತದೆ. ಭೂಮಿಯ ಮೇಲೆ ವಾಸಿಸುವವರು, ಕತ್ತಿಯಿಂದ ಗಾಯಹೊಂದಿ, ಸಾಯದೆ ಬದುಕಿದ ಮೃಗದ ವಿಗ್ರಹವನ್ನು ಮಾಡಿಸಿಕೊಳ್ಳಬೇಕೆಂದು ಹೇಳುತ್ತದೆ. 15 ಆ ಮೃಗದ ವಿಗ್ರಹಕ್ಕೆ ಜೀವಕೊಡುವ ಸಾಮರ್ಥ್ಯವು ಕೊಡಲಾಗಿದ್ದರಿಂದ, ಆ ವಿಗ್ರಹವು ಮಾತನಾಡುವಂತೆಯೂ ತನ್ನನ್ನು ಆರಾಧನೆ ಮಾಡದವರನ್ನು ಕೊಲ್ಲುವಂತೆಯೂ ಮಾಡುತ್ತದೆ. 16 ಅದು ಚಿಕ್ಕವರು, ದೊಡ್ಡವರು, ಐಶ್ವರ್ಯವಂತರು, ಬಡವರು, ಸ್ವತಂತ್ರರು, ಗುಲಾಮರು, ಎಲ್ಲರೂ ತಮ್ಮ ತಮ್ಮ ಬಲಗೈಯ ಮೇಲಾಗಲಿ, ಹಣೆಯ ಮೇಲಾಗಲಿ ಗುರುತು ಹೊಂದಬೇಕೆಂದೂ 17 ಆ ಗುರುತಾಗಲಿ, ಮೃಗದ ಹೆಸರಾಗಲಿ, ಅದರ ಹೆಸರಿನ ಸಂಖ್ಯೆಯಾಗಲಿ ಇಲ್ಲದವನು ಕ್ರಯ ವಿಕ್ರಯಗಳನ್ನು ಮಾಡದಂತೆಯೂ ಅದು ಮಾಡುವುದು.
18 ಇದರಲ್ಲಿ ಜ್ಞಾನವಿದೆ. ಬುದ್ಧಿಯುಳ್ಳವನು ಆ ಮೃಗದ ಸಂಖ್ಯೆಯನ್ನು ಎಣಿಸಲಿ, ಅದು ಒಬ್ಬ ಮನುಷ್ಯನ ಸಂಖ್ಯೆಯಾಗಿದೆ. ಅವನ ಸಂಖ್ಯೆಯು 666.