ಧರ್ಮೋಪದೇಶಕಾಂಡ
1
ಹೋರೇಬನ್ನು ಬಿಡಬೇಕೆಂಬ ಆಜ್ಞೆ
1 ಯೊರ್ದನ್ ನದಿಯ ಆಚೆ ಪಾರಾನ್, ತೋಫೆಲ್, ಲಾಬಾನ್, ಹಚೇರೋತ್, ದೀಜಾಹಾಬ್ ಎಂಬ ಊರುಗಳ ನಡುವೆ, ಮರುಭೂಮಿಯಲ್ಲಿ ಅರಾಬಾ ಎಂಬ ತಗ್ಗಾದ ಪ್ರದೇಶದಲ್ಲಿ ಸೂಫಿಗೆ ಎದುರಾಗಿ, ಮೋಶೆ ಇಸ್ರಾಯೇಲರಿಗೆ ಹೇಳಿದ ಮಾತುಗಳು ಇವು. 2 ಹೋರೇಬಿನಿಂದ ಕಾದೇಶ್ ಬರ್ನೇಯಕ್ಕೆ ಸೇಯೀರ್ ಬೆಟ್ಟದ ಮಾರ್ಗವಾಗಿ ಹನ್ನೊಂದು ದಿವಸ ಪ್ರಯಾಣ.
3 ನಲ್ವತ್ತನೆಯ ವರ್ಷದಲ್ಲಿ ಹನ್ನೊಂದನೇ ತಿಂಗಳಿನ ಮೊದಲನೇ ದಿನದಲ್ಲಿ, ಮೋಶೆಯು ಇಸ್ರಾಯೇಲರಿಗೆ, ಯೆಹೋವ ದೇವರು ಅವನಿಗೆ ಅವರ ವಿಷಯವಾಗಿ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಮಾತನಾಡಿದನು. 4 ಅವನು ಹೆಷ್ಬೋನಿನಲ್ಲಿ ವಾಸಮಾಡಿದ ಅಮೋರಿಯರ ಅರಸನಾದ ಸೀಹೋನನನ್ನು ಸೋಲಿಸಿದ ಮೇಲೆಯೂ, ಅಷ್ಟಾರೋತ್‌ನಲ್ಲಿ, ವಾಸಮಾಡಿದ ಬಾಷಾನಿನ ಅರಸನಾದ ಓಗನನ್ನೂ ಎದ್ರೈಯಲ್ಲಿ ಸೋಲಿಸಿದ ಮೇಲೆಯೂ ಮೋಶೆ ಇಸ್ರಾಯೇಲರಿಗೆ ಈ ಮಾತುಗಳನ್ನು ತಿಳಿಸಿದನು.
5 ಯೊರ್ದನ್ ನದಿಯ ಆಚೆ ಮೋವಾಬ್ಯರ ದೇಶದಲ್ಲಿ ಮೋಶೆ ಈ ನಿಯಮವನ್ನು ವಿವರಿಸುವುದಕ್ಕೆ ಪ್ರಾರಂಭಿಸಿದನು:
6 ನಮ್ಮ ದೇವರಾದ ಯೆಹೋವ ದೇವರು ಹೋರೇಬಿನಲ್ಲಿ ನಮಗೆ, “ನೀವು ಈ ಬೆಟ್ಟದಲ್ಲಿ ವಾಸಮಾಡಿದ್ದು ಸಾಕು, 7 ತಿರುಗಿಕೊಂಡು ಹೊರಟು ಅಮೋರಿಯರ ಬೆಟ್ಟಕ್ಕೂ, ಅದರ ಅರಾಬಾ ಸಮೀಪದ ಎಲ್ಲಾ ಪ್ರದೇಶದ ಗುಡ್ಡದಲ್ಲಿಯೂ ತಗ್ಗಿನಲ್ಲಿಯೂ ನೆಗೆವನಲ್ಲಿಯೂ ಸಮುದ್ರ ತೀರದಲ್ಲಿಯೂ ಇರುವ ಎಲ್ಲಾ ಸ್ಥಳಗಳಿಗೂ ಕಾನಾನ್ಯರ ದೇಶಕ್ಕೂ, ಲೆಬನೋನಿಗೂ ಯೂಫ್ರೇಟೀಸ್ ಎಂಬ ಮಹಾನದಿಯ ಬಳಿಗೂ ಹೋಗಿರಿ. 8 ಆ ದೇಶವನ್ನು ನಿಮಗೆ ಕೊಟ್ಟಿದ್ದೇನೆ. ನೀವು ಹೋಗಿ ಯೆಹೋವ ದೇವರಾದ ನಾನು ನಿಮ್ಮ ಪಿತೃಗಳಾದ ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಅವರ ತರುವಾಯ ಹುಟ್ಟುವ ಅವರ ಸಂತತಿಗೂ ಕೊಡುತ್ತೇನೆಂದು ಪ್ರಮಾಣ ಮಾಡಿದ ದೇಶವನ್ನು ಸ್ವತಂತ್ರಿಸಿಕೊಳ್ಳಿರಿ,” ಎಂದು ಹೇಳಿದರು.
ನಾಯಕರ ನೇಮಕ
9 ಆ ಕಾಲದಲ್ಲಿ ನಾನು ನಿಮಗೆ, “ನಾನೊಬ್ಬನೇ ನಿಮ್ಮ ಭಾರವನ್ನು ಹೊರಲಾರೆನು. 10 ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಹೆಚ್ಚಿಸಿದ್ದಾರೆ. ನೀವು ಈ ಹೊತ್ತು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಾಗಿದ್ದೀರಿ. 11 ನೀವು ಈಗ ಇರುವುದಕ್ಕಿಂತ ಇನ್ನೂ ಸಾವಿರದಷ್ಟಾಗುವಂತೆ ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ನಿಮ್ಮನ್ನು ಹೆಚ್ಚಿಸಲಿ, ಅವರು ವಾಗ್ದಾನ ಮಾಡಿದ ಪ್ರಕಾರ ನಿಮ್ಮನ್ನು ಆಶೀರ್ವದಿಸಲಿ. 12 ಆದರೆ ನಿಮ್ಮ ಸಮಸ್ಯೆಗಳನ್ನೂ ಹೊಣೆಯನ್ನೂ ವ್ಯಾಜ್ಯಗಳನ್ನೂ ನಾನೊಬ್ಬನೇ ಸಹಿಸುವುದು ಹೇಗೆ? 13 ಆದ್ದರಿಂದ ನೀವು ಪ್ರತಿಯೊಂದು ಗೋತ್ರದಿಂದ ಜ್ಞಾನಿಗಳೂ ವಿವೇಕಿಗಳೂ ಪ್ರಖ್ಯಾತರೂ ಆದ ವ್ಯಕ್ತಿಗಳನ್ನು ಆರಿಸಿಕೊಳ್ಳಿರಿ. ನಾನು ಅವರನ್ನು ನಿಮಗೆ ಅಧಿಪತಿಗಳಾಗಿ ನೇಮಿಸುತ್ತೇನೆ,” ಎಂದು ಹೇಳಿದೆನು.
14 ಅದಕ್ಕೆ ನೀವು ನನಗೆ ಉತ್ತರವಾಗಿ, “ನೀನು ಹೇಳಿದ ಮಾತು ಮಾಡುವುದಕ್ಕೆ ಒಳ್ಳೆಯದು,” ಎಂದಿರಿ.
15 ಆಗ ನಾನು ನಿಮ್ಮಲ್ಲಿ ಪ್ರಸಿದ್ಧರಾದ ಜ್ಞಾನಿಗಳನ್ನು ಕರೆಯಿಸಿ, ಒಂದೊಂದು ಗೋತ್ರದಲ್ಲಿ ಸಾವಿರ ಮಂದಿಯ ಮೇಲೆ, ನೂರು ಮಂದಿಯ ಮೇಲೆ, ಐವತ್ತು ಮಂದಿಯ ಮೇಲೆ, ಹತ್ತು ಮಂದಿಯ ಮೇಲೆ ಅಧಿಕಾರಿಗಳನ್ನಾಗಿ ನೇಮಿಸಿದೆನು. 16 ಆ ನ್ಯಾಯಾಧಿಪತಿಗಳಿಗೆ ಆ ಕಾಲದಲ್ಲಿ ನಾನು, “ನಿಮ್ಮ ಸಹೋದರರು ತಮ್ಮಲ್ಲಿ ಮಾಡುವ ವ್ಯಾಜ್ಯಗಳನ್ನು ವಿಚಾರಿಸಬೇಕು. ಅದು ಇಸ್ರಾಯೇಲರ ವ್ಯಾಜ್ಯವಾಗಿರಬಹುದು. ಇಸ್ರಾಯೇಲರಲ್ಲದವರ ವ್ಯಾಜ್ಯವಾಗಿರಬಹುದು. ಎಲ್ಲವನ್ನು ನೀವು ನ್ಯಾಯದ ಪ್ರಕಾರವೇ ತೀರ್ಮಾನಿಸಬೇಕು. 17 ನ್ಯಾಯದಲ್ಲಿ ನೀವು ಮುಖದಾಕ್ಷಿಣ್ಯ ಮಾಡಬೇಡಿರಿ. ಹಿರಿಯನನ್ನು ಹೇಗೋ ಹಾಗೆಯೇ ಕಿರಿಯನನ್ನು ಕೇಳಬೇಕು. ಯಾವ ಮನುಷ್ಯನಿಗೂ ಹೆದರಬೇಡಿರಿ. ಆದರೆ ನ್ಯಾಯ ತೀರ್ವಿಕೆಯು ದೇವರದೇ. ನಿಮಗೆ ಕಠಿಣವಾದ ವ್ಯಾಜ್ಯಗಳನ್ನು ನನ್ನ ಮುಂದೆ ತನ್ನಿರಿ, ನಾನು ಅದನ್ನು ತೀರಿಸುವೆನು,” ಎಂದು ಹೇಳಿದೆ. 18 ಹೀಗೆ ನೀವು ಮಾಡತಕ್ಕ ಕಾರ್ಯಗಳನ್ನೆಲ್ಲಾ ಆ ಕಾಲದಲ್ಲಿ ನಿಮಗೆ ಆಜ್ಞಾಪಿಸಿದೆನು.
ಗೂಢಚಾರರನ್ನು ಕಳುಹಿಸಿದ್ದು
19 ಆಗ ನಾವು ಹೋರೇಬಿನಿಂದ ಹೊರಟು ನಮ್ಮ ದೇವರಾದ ಯೆಹೋವ ದೇವರು ನಮಗೆ ಆಜ್ಞಾಪಿಸಿದ ಪ್ರಕಾರ, ನೀವು ಅಮೋರಿಯರ ಬೆಟ್ಟದ ಮಾರ್ಗದಲ್ಲಿ ನೋಡಿದ ಆ ದೊಡ್ಡ ಭಯಂಕರವಾದ ಮರುಭೂಮಿಯನ್ನೆಲ್ಲಾ ದಾಟಿ, ಕಾದೇಶ್ ಬರ್ನೇಯಕ್ಕೆ ಬಂದೆವು. 20 ಆಗ ನಾನು ನಿಮಗೆ, “ನಮ್ಮ ದೇವರಾದ ಯೆಹೋವ ದೇವರು ನಮಗೆ ಕೊಡುವ ಅಮೋರಿಯರ ಮಲೆನಾಡಿಗೆ ಹತ್ತಿರ ಬಂದಿದ್ದೀರಿ. 21 ನಿಮ್ಮ ದೇವರಾದ ಯೆಹೋವ ದೇವರು ದೇಶವನ್ನು ನಿಮಗೆ ಕೊಟ್ಟಿದ್ದಾರೆ, ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ನಿಮಗೆ ಹೇಳಿದ ಪ್ರಕಾರ ಅದನ್ನು ಏರಿ ಸ್ವಾಧೀನಮಾಡಿಕೊಳ್ಳಿರಿ. ಭಯಪಡಬೇಡಿರಿ, ಧೈರ್ಯವಾಗಿರಿ,” ಎಂದೆನು.
22 ಆಗ ನೀವೆಲ್ಲರು ನನ್ನ ಬಳಿಗೆ ಬಂದು, “ನಮಗಿಂತ ಮುಂದಾಗಿ ಜನರನ್ನು ಕಳುಹಿಸೋಣ. ಅವರು ನಮಗೆ ದೇಶವನ್ನು ಸಂಚರಿಸಿ ನೋಡಿ, ನಾವು ಮೇಲೆ ಹೋಗತಕ್ಕ ಮಾರ್ಗದ ವಿಷಯದಲ್ಲಿಯೂ ನಾವು ಪ್ರವೇಶಿಸುವ ಪಟ್ಟಣಗಳ ವಿಷಯದಲ್ಲಿಯೂ ನಮಗೆ ಸಮಾಚಾರವನ್ನು ತರಲಿ,” ಎಂದು ಹೇಳಿದಿರಿ.
23 ಆ ಮಾತು ನನಗೆ ಒಳ್ಳೆಯದೆಂದು ತೋಚಿತು. ನಾನು ನಿಮ್ಮಲ್ಲಿ ಗೋತ್ರಕ್ಕೆ ಒಬ್ಬನ ಪ್ರಕಾರ ಹನ್ನೆರಡು ಮಂದಿಯನ್ನು ಆರಿಸಿಕೊಂಡೆನು. 24 ಅವರು ಹೋಗಿ ಬೆಟ್ಟವನ್ನೇರಿ, ಎಷ್ಕೋಲೆಂಬ ಹಳ್ಳದ ಬಳಿಗೆ ಬಂದು, ಅದನ್ನು ಸಂಚರಿಸಿ ನೋಡಿ, 25 ಆ ದೇಶದ ಫಲದಲ್ಲಿ ಕೆಲವನ್ನು ಕೈಯಲ್ಲಿ ತೆಗೆದುಕೊಂಡು, ನಮ್ಮ ಬಳಿಗೆ ತಂದು ತೋರಿಸಿ, “ನಮ್ಮ ದೇವರಾದ ಯೆಹೋವ ದೇವರು ನಮಗೆ ಕೊಡುವ ದೇಶವು ಒಳ್ಳೆಯದು,” ಎಂದು ವರದಿಮಾಡಿದರು.
ಯೆಹೋವ ದೇವರ ವಿರುದ್ಧ ದಂಗೆ
26 ಆದರೆ ನೀವು ಮೇಲೆ ಹತ್ತಿ ಹೋಗುವುದಕ್ಕೆ ಮನಸ್ಸಿಲ್ಲದೆ ನಿಮ್ಮ ದೇವರಾದ ಯೆಹೋವ ದೇವರ ಅಪ್ಪಣೆಗೆ ತಿರುಗಿಬಿದ್ದಿರಿ. 27 ನೀವು ನಿಮ್ಮ ಗುಡಾರಗಳಲ್ಲಿ ಗೊಣಗುಟ್ಟಿ, “ಯೆಹೋವ ದೇವರು ನಮ್ಮನ್ನು ಹಗೆ ಮಾಡಿದ್ದರಿಂದ, ನಮ್ಮನ್ನು ಅಮೋರಿಯರ ಕೈಗೆ ಒಪ್ಪಿಸಿ, ನಮ್ಮನ್ನು ನಾಶಮಾಡುವುದಕ್ಕೆ ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದ್ದಾರೆ. 28 ನಾವು ಎಲ್ಲಿಗೆ ಏರಿಹೋಗೋಣ? ನಮ್ಮ ಸಹೋದರರು, ‘ಆ ಜನರು ನಮಗಿಂತ ಬಲಿಷ್ಠರೂ ಎತ್ತರವಾದವರೂ ಪಟ್ಟಣಗಳು ದೊಡ್ಡವೂ, ಆಕಾಶವನ್ನು ಮುಟ್ಟುವ ಗೋಡೆಯುಳ್ಳವುಗಳೂ ಆಗಿವೆ. ಇದಲ್ಲದೆ ರಾಕ್ಷಸಾಕಾರದ ಅನಾಕ್ಯರ ಮಕ್ಕಳನ್ನು ಅಲ್ಲಿ ನೋಡಿದೆವು’ ಎಂದು ಹೇಳಿ ನಮ್ಮ ಹೃದಯಗಳನ್ನು ಅಧೈರ್ಯಪಡಿಸಿದ್ದಾರೆ,” ಎಂದು ಹೇಳಿದಿರಿ.
29 ಆಗ ನಾನು ನಿಮಗೆ, “ಅಂಜಬೇಡಿರಿ, ಅವರಿಗೆ ಭಯಪಡಬೇಡಿರಿ. 30 ನಿಮ್ಮ ಮುಂದೆ ಹೋಗುವ ನಿಮ್ಮ ದೇವರಾದ ಯೆಹೋವ ದೇವರು ಈಜಿಪ್ಟಿನಲ್ಲಿಯೂ ಮರುಭೂಮಿಯಲ್ಲಿಯೂ ನಿಮ್ಮ ಕಣ್ಣು ಮುಂದೆ, ಯುದ್ಧಮಾಡಿದಂತೆಯೇ ಈಗಲೂ ನಿಮಗೋಸ್ಕರ ಯುದ್ಧಮಾಡುವರು. 31 ನೀವು ಈ ಸ್ಥಳಕ್ಕೆ ಸೇರುವ ತನಕ ನಿಮ್ಮ ಪ್ರಯಾಣದಲ್ಲೆಲ್ಲಾ ಒಬ್ಬ ತಂದೆ ತನ್ನ ಮಗನನ್ನು ಹೇಗೆ ಹೊರುತ್ತಾನೋ ಹಾಗೆಯೇ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಹೊತ್ತು ತಂದರಲ್ಲವೇ?” ಎಂದು ನಿಮಗೆ ಹೇಳಿದೆನು.
32 ಆದರೆ ಈ ಕಾರ್ಯದಲ್ಲಿ ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ನಂಬಲಿಲ್ಲ. 33 ಅವರೇ ನಿಮಗೆ ಇಳಿದುಕೊಳ್ಳುವುದಕ್ಕೆ ಸ್ಥಳವನ್ನು ಗೊತ್ತುಮಾಡಿ ನೀವು ಹೋಗತಕ್ಕ ಮಾರ್ಗವನ್ನು ನಿಮಗೆ ತೋರಿಸಲು ರಾತ್ರಿ ಹೊತ್ತು ಬೆಂಕಿಯಲ್ಲಿಯೂ ಹಗಲು ಹೊತ್ತು ಮೇಘದಲ್ಲಿಯೂ ನಿಮ್ಮ ಮುಂದೆ ಹೋದರು.
34 ಯೆಹೋವ ದೇವರು ನಿಮ್ಮ ಮಾತುಗಳನ್ನು ಕೇಳಿ, ಬೇಸರಗೊಂಡು, ಪ್ರಮಾಣಮಾಡಿ, 35 “ಕೆಟ್ಟ ಸಂತತಿಯಾದ ಈ ಮನುಷ್ಯರಲ್ಲಿ ಒಬ್ಬನಾದರೂ ನಾನು ನಿಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ಒಳ್ಳೆಯ ದೇಶವನ್ನು ನೋಡುವುದಿಲ್ಲ. 36 ಯೆಫುನ್ನೆಯ ಮಗ ಕಾಲೇಬನು ಮಾತ್ರ ಅದನ್ನು ನೋಡುವನು. ಅವನು ಯೆಹೋವ ದೇವರನ್ನು ಪೂರ್ಣವಾಗಿ ಹಿಂಬಾಲಿಸಿದ್ದರಿಂದ, ಅವನು ಸಂದರ್ಶಿಸಿದ ದೇಶವನ್ನು ಅವನಿಗೂ ಅವನ ಮಕ್ಕಳಿಗೂ ಕೊಡುವೆನು,” ಎಂದರು.
37 ನನ್ನ ಮೇಲೆಯೂ ಯೆಹೋವ ದೇವರು ನಿಮ್ಮ ವಿಷಯವಾಗಿ ಬೇಸರಮಾಡಿಕೊಂಡು, “ನೀನು ಸಹ ಅದರಲ್ಲಿ ಪ್ರವೇಶಿಸುವುದಿಲ್ಲ. 38 ಆದರೆ ನಿನ್ನ ಮುಂದೆ ನಿಂತಿರುವ ನೂನನ ಮಗ ಯೆಹೋಶುವನು ಅಲ್ಲಿಗೆ ಸೇರುವನು. ಅವನನ್ನು ಧೈರ್ಯಗೊಳಿಸು. ಅವನೇ ಆ ನಾಡನ್ನು ಇಸ್ರಾಯೇಲಿಗೆ ಸ್ವಾಧೀನಪಡಿಸುವನು. 39 ಇದಲ್ಲದೆ ಸೆರೆಯಾಗಿ ಹೋಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕವರೂ ಈ ಹೊತ್ತು ಒಳ್ಳೆಯದು, ಕೆಟ್ಟದ್ದು ಅರಿಯದ ನಿಮ್ಮ ಮಕ್ಕಳು ಅದರಲ್ಲಿ ಪ್ರವೇಶಿಸುವರು. ನಾನು ಅವರಿಗೆ ಅದನ್ನು ಕೊಡುವೆನು, ಅವರು ಅದನ್ನು ಸ್ವತಂತ್ರಿಸಿಕೊಳ್ಳುವರು. 40 ನೀವಾದರೋ ತಿರುಗಿಕೊಂಡು ಕೆಂಪು ಸಮುದ್ರ ಮಾರ್ಗವಾಗಿ ಮರುಭೂಮಿಗೆ ಹೊರಟು ಹೋಗಿರಿ,” ಎಂದು ಹೇಳಿದರು.
41 ಆಗ ನೀವು ಉತ್ತರಕೊಟ್ಟು ನನಗೆ, “ಯೆಹೋವ ದೇವರಿಗೆ ಪಾಪಮಾಡಿದ್ದೇವೆ. ನಮ್ಮ ದೇವರಾದ ಯೆಹೋವ ದೇವರು ನಮಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ನಾವು ಬೆಟ್ಟವನ್ನು ಹತ್ತಿ ಯುದ್ಧ ಮಾಡುತ್ತೇವೆ. ನೀವೆಲ್ಲರು ನಿಮ್ಮ ಯುದ್ಧದ ಆಯುಧಗಳನ್ನು ಕಟ್ಟಿಕೊಂಡ ಮೇಲೆ ಬೆಟ್ಟಕ್ಕೆ ಹೊರಟುಹೋಗುವುದು ಸಣ್ಣ ಕೆಲಸ,” ಎಂದು ಹೇಳಿದಿರಿ.
42 ಆದರೆ ಯೆಹೋವ ದೇವರು ನನಗೆ, “ ‘ಏರಿ ಹೋಗಬೇಡಿರಿ, ಯುದ್ಧಮಾಡಬೇಡಿರಿ. ಏಕೆಂದರೆ ನಾನು ನಿಮ್ಮ ಮಧ್ಯದಲ್ಲಿ ಇಲ್ಲ. ನೀವು ನಿಮ್ಮ ಶತ್ರುಗಳಿಂದ ಸೋಲನ್ನು ಅನುಭವಿಸುವಿರಿ,’ ಎಂದು ಅವರಿಗೆ ಹೇಳು,” ಎಂದರು.
43 ಇದನ್ನು ನಾನು ನಿಮಗೆ ಹೇಳಲಾಗಿ ನೀವು ಕೇಳದೆ, ಯೆಹೋವ ದೇವರ ಅಪ್ಪಣೆಗೆ ತಿರುಗಿಬಿದ್ದು, ಗರ್ವದಿಂದ ಧೈರ್ಯಮಾಡಿ ಬೆಟ್ಟವನ್ನೇರಿದಿರಿ. 44 ಆಗ ಆ ಬೆಟ್ಟದಲ್ಲಿ ವಾಸಮಾಡುತ್ತಿದ್ದ ಅಮೋರಿಯರು ನಿಮಗೆ ವಿರುದ್ಧವಾಗಿ ಹೊರಟು, ಜೇನುಹುಳಗಳು ಮುತ್ತಿದಂತೆ ನಿಮ್ಮ ಬೆನ್ನು ಹತ್ತಿ, ಸೇಯೀರಿನಲ್ಲಿ ಹೊರ್ಮಾದವರೆಗೂ ನಿಮ್ಮನ್ನು ಸಂಹಾರ ಮಾಡಿದರು. 45 ನೀವು ತಿರುಗಿಕೊಂಡು ಯೆಹೋವ ದೇವರ ಮುಂದೆ ಅತ್ತಿರಿ. ಆದರೆ ಯೆಹೋವ ದೇವರು ನಿಮ್ಮ ಧ್ವನಿಗೆ ಕಿವಿಗೊಡಲಿಲ್ಲ. 46 ಆಮೇಲೆ ನೀವು ಕಾದೇಶಿನಲ್ಲಿ ಬಹಳ ದಿವಸ ವಾಸವಾಗಿದ್ದಿರಿ.